ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): ಶ್ರೀನಗರದ ವಾಯುಸೇನಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ವಿರುದ್ಧ ಜಮ್ಮು ಕಾಶ್ಮೀರ ಪೊಲೀಸರು ಸಹೋದ್ಯೋಗಿ ಮೇಲೆ ಅತ್ಯಾಚಾರವೆಸಗಿದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಈ ಕುರಿತು ಸಂತ್ರಸ್ತ ಮಹಿಳಾ ಫ್ಲೈಯಿಂಗ್ ಅಧಿಕಾರಿ ಪೊಲೀಸರಿಗೆ ದೂರು ನೀಡಿದ್ದರು. ಇಲ್ಲಿನ ಬದ್ಗಾಮ್ ಪೊಲೀಸ್ ಠಾಣೆಯಲ್ಲಿ ಪೊಲೀಸರು, ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ(ಬಿಎನ್‌ಎಸ್) ಸೆಕ್ಷನ್ 376 (2) ಮಹತ್ವದ ಹುದ್ದೆಯಲ್ಲಿರುವ ವ್ಯಕ್ತಿಯಿಂದ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.
2023ರ ಡಿಸೆಂಬರ್ 31ರ ರಾತ್ರಿ ಅಧಿಕಾರಿಗಳ ಮೆಸ್‌ನಲ್ಲಿ ಹೊಸ ವರ್ಷದ ಪಾರ್ಟಿ ವೇಳೆ ಘಟನೆ ನಡೆದಿದೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ. 2024 ಜನವರಿ 2ರ ರಾತ್ರಿ 2 ಗಂಟೆಗೆ ಹೊಸ ಉಡುಗೊರೆ ನೀಡುವುದಾಗಿ ವಿಂಗ್ ಕಮಾಂಡರ್ ನನ್ನನ್ನು ಅವರ ಕೊಠಡಿಗೆ ಆಹ್ವಾನಿಸಿದ್ದರು. ಈ ವೇಳೆ ಪರಿಪರಿಯಾಗಿ ಮನವಿ ಮಾಡಿದರೂ ಲೈಂಗಿಕ ದೌರ್ಜನ್ಯ ಎಸಗಿದರು. ಬಳಿಕ ನಾನು ಅವರನ್ನು ತಳ್ಳಿ ಓಡಿ ಹೊರಬಂದೆ ಎಂದು ತಿಳಿಸಿದ್ದಾರೆ.
ಈ ಘಟನೆಯ ನಂತರ ಸಾಕಷ್ಟು ಮಾನಸಿಕ ತೊಳಲಾಟ ಅನುಭವಿಸಿದೆ. ಈ ಅಪರಾಧವನ್ನು ಬಹಿರಂಗಪಡಿಸಿದರೆ ನನ್ನ ಮೇಲಾಗುವ ಪರಿಣಾಮಗಳು ಹಾಗು ಪ್ರಕರಣದಲ್ಲಿ ಹೇಗೆ ಮುಂದುವರೆಯಬೇಕೆಂದು ತೋಚದೆ ಗೊಂದಲಕ್ಕೊಳಗಾದೆ. ಈ ಹಿಂದೆ ಇಂಥದ್ದೇ ಘಟನೆಯನ್ನು ವರದಿ ಮಾಡಲು ನನಗೆ ಅಡ್ಡಿಪಡಿಸಲಾಗಿತ್ತು. ಹೀಗಾಗಿ ನಾನು ಭಯಗೊಂಡಿದ್ದೆ. ಈ ಘಟನೆಯ ನಂತರ ಆರೋಪಿ ಅಧಿಕಾರಿ ಯಾವುದೇ ಘಟನೆಯೇ ನಡೆದಿಲ್ಲ ಎಂಬಂತೆ ಹಾಗು ಯಾವುದೇ ಪಶ್ಚಾತ್ತಾಪವೂ ಇಲ್ಲದೇ ನನ್ನ ಕಚೇರಿಗೆ ಬರುತ್ತಿದ್ದರು ಎಂದು ವಿವರಿಸಿದ್ದಾರೆ.