ಡೆಹ್ರಾಡೂನ್: ವಿವಿಧ ಪಕ್ಷಗಳಿಗೆ ದೇಣಿಗೆ ರೂಪದಲ್ಲಿ ನೀಡಲಾದ ಚುನಾವಣಾ ಬಾಂಡ್ ವಿವರಗಳನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಎಸ್‌ಬಿಐ ಸಲ್ಲಿಸಿದ್ದು, ಇದನ್ನು ಸುಪ್ರೀಂ ಕೋರ್ಟ್‌ನ ಆದೇಶದಂತೆ ಆಯೋಗವು ತನ್ನ ಅಂತರ್ಜಾಲ ಪುಟದಲ್ಲಿ ಪ್ರಕಟಿಸಿದೆ. ಇದರಲ್ಲಿ ದೇಶದ ಅತಿ ದೊಡ್ಡ ರಾಜಕೀಯ ಪಕ್ಷ ಬಿಜೆಪಿಗೆ ಪ್ರಮುಖ ಕಂಪನಿಗಳಿಂದ ಟ್ರಸ್ಟ್ ಮೂಲಕ ನೂರಾರು ಕೋಟಿ ರೂಪಾಯಿ ದೇಣಿಗೆ ಸಂದಾಯವಾಗಿದೆ ಎಂಬ ಅಂಶ ದೇಶದ ಮುಂದಿದೆ.
ಲಭ್ಯವಿರುವ ಮಾಹಿತಿ ಪ್ರಕಾರ ಕಾಂಗ್ರೆಸ್ ಪಡೆದ ದೇಣಿಗೆಗಿಂತ ಬಿಜೆಪಿಯೇ ಅತಿ ಹೆಚ್ಚು ದೇಣಿಗೆ ಸಂಗ್ರಹ ಮಾಡಿರುವ ರಾಜಕೀಯ ಪಕ್ಷವಾಗಿದೆ ಎಂಬ ಮಾಹಿತಿ ಕೂಡ ಬಹಿರಂಗಗೊಂಡಿದೆ. ಒಂದೆಡೆ ಹಣದ ಸಂಗ್ರಹ, ಮತ್ತೊಂದೆಡೆ ಹಣದ ಕೊರತೆ ಕಂಡು ಬರುತ್ತಿರುವುದು ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಹಾಗೂ ಜನಸಾಮಾನ್ಯರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಪರಿಣಾಮ ಲೋಕಸಭೆಗೆ ಸ್ಪರ್ಧಿಸುವ ಮನಸ್ಸು ಇದ್ದರೂ ಕೂಡ ಕೆಲವರು ಸಂಪನ್ಮೂಲದ ಕೊರತೆಯಿಂದ ಹಿಂದೇಟು ಹಾಕುವ ಪರಿಸ್ಥಿತಿ ಉಲ್ಬಣಗೊಂಡಿದೆ. ಕಾಂಗ್ರೆಸ್ ಪಕ್ಷದಲ್ಲಿ ಈ ರೀತಿಯ ವ್ಯವಸ್ಥೆ ತುಸು ಹೆಚ್ಚೇ ಇದೆ ಎಂಬುದು ಉತ್ತರಾಖಂಡ ರಾಜಕೀಯ ವಿಶ್ಲೇಷಕರ ಮಾತಾಗಿದೆ.
ಉತ್ತರಾಖಂಡದಲ್ಲಿ ಕಳೆದ ಕೆಲ ವರ್ಷಗಳಿಂದ ರಾಜ್ಯ ಕಾಂಗ್ರೆಸ್ ಪಕ್ಷದೊಳಗೆ ಆರ್ಥಿಕ ಸಮಸ್ಯೆಗಳು ಹೆಚ್ಚಾಗಿಯೇ ಕಂಡು ಬರುತ್ತಿವೆ. ಪಕ್ಷ ಸಂಘಟನೆಯ ಮಟ್ಟದಲ್ಲಿ ಹಣ ಸಂಗ್ರಹಿಸುವ ಪ್ರಯತ್ನಗಳು ನಡೆದಿದೆಯಾದರೂ ಅಷ್ಟು ಪರಿಣಾಮಕಾರಿಯಾಗಿಲ್ಲ. ಬಿಜೆಪಿ ಮುಂದೆ ಹಣಬಲದ ವಿಷಯದಲ್ಲಿ ಕಾಂಗ್ರೆಸ್ ಸ್ವಲ್ಪ ದುರ್ಬಲವಾಗಿದೆ ಅನ್ನೋದನ್ನು ಒತ್ತಿ ಹೇಳಬೇಕಿಲ್ಲ. ಕಾಂಗ್ರೆಸ್ ನಾಯಕರು ಕೂಡ ಇದನ್ನು ಒಪ್ಪಿಕೊಂಡಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ಗೆ ದೇಣಿಗೆ ನೀಡುವವರ ಸಂಖ್ಯೆಯೂ ಕಡಿಮೆಯಾಗಿದೆ. ಒಂದೆಡೆ ಬಿಜೆಪಿ ಕಳೆದ ವರ್ಷಗಳಲ್ಲಿ ಉತ್ತರಾಖಂಡದಿಂದಲೇ 25 ಕೋಟಿಗೂ ಹೆಚ್ಚು ದೇಣಿಗೆ ಸಂಗ್ರಹಿಸುವುದಾಗಿ ಹೇಳಿಕೊಂಡರೆ, ಮತ್ತೊಂದೆಡೆ ಉತ್ತರಾಖಂಡ ಕಾಂಗ್ರೆಸ್ ಪಕ್ಷ ಮುಖಂಡರಿಂದ ನಿಧಿ ಸಂಗ್ರಹಿಸುವಲ್ಲಿ ವಿಫಲವಾಗಿದೆ ಎಂಬುದು ವಿಶ್ಲೇಷಕರ ಮಾತು.
ಕಾಂಗ್ರೆಸ್ ಅಭ್ಯರ್ಥಿಯ ಮಾತು:ಈಟಿವಿ ಭಾರತ ಜೊತೆ ಮಾತನಾಡಿದ ಗರ್ವಾಲ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಗೋಡಿಯಾಲ್, ತಮ್ಮ ಸಮಸ್ಯೆಯನ್ನು ಪಕ್ಷದ ಹೈಕಮಾಂಡ್ ಮುಂದೆ ಇಟ್ಟಿದ್ದೇವೆ. ಚುನಾವಣೆಗೆ ಸ್ಪರ್ಧಿಸದಿರಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿರುವೆ. ಆದರೆ, ಕಾರ್ಯಕರ್ತರು ಸಂಪನ್ಮೂಲಗಳನ್ನು ಸಂಗ್ರಹಿಸುವ ಭರವಸೆ ನೀಡಿದ್ದರಿಂದ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿರುವೆ ಎಂದಿದ್ದಾರೆ. ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಚುನಾವಣಾ ಸಮಯದಲ್ಲಿ ಬಿಜೆಪಿಯು ಹಣ ಬಲ ಬಳಸುತ್ತಿದೆ ಎಂದು ಸಹ ಆರೋಪ ಮಾಡಿದ್ದಾರೆ. ಆದರೆ, ಈ ಆರೋಪವನ್ನು ಬಿಜೆಪಿ ತಳ್ಳಿ ಹಾಕಿದೆ.