ಕರ್ನಾಟಕ

karnataka

ETV Bharat / bharat

ಡಿಸೆಂಬರ್​​ 30 ರಂದು ನೇಮಕ, 31ಕ್ಕೆ ನಿವೃತ್ತಿ: ಶಿಕ್ಷಕಿಯೊಬ್ಬರ ವಿಚಿತ್ರ ಕಹಾನಿ - TEACHER RETIRED DAY BEFORE JOINING

ಸರ್ಕಾರಿ ಹುದ್ದೆ ಸೇರಬೇಕು ಎಂಬ ಆಸೆ ಹಲವರಿಗೆ ಇರುತ್ತದೆ. ಇಲ್ಲೊಬ್ಬ ಶಿಕ್ಷಕಿಗೆ ಸರ್ಕಾರಿ ಹುದ್ದೆ ಸಿಕ್ಕರೂ ಮರುದಿನವೇ ನಿವೃತ್ತರಾಗಿದ್ದಾರೆ. ಈ ವಿಚಿತ್ರ ಕಹಾನಿಯ ಕಂಪ್ಲೀಟ್​ ಸ್ಟೋರಿ ಇಲ್ಲಿದೆ.

ನೇಮಕಾತಿ ಪತ್ರದೊಂದಿಗೆ ಬಿಹಾರ ಶಿಕ್ಷಕಿ ಅನಿತಾ ಕುಮಾರಿ
ನೇಮಕಾತಿ ಪತ್ರದೊಂದಿಗೆ ಬಿಹಾರ ಶಿಕ್ಷಕಿ ಅನಿತಾ ಕುಮಾರಿ (ETV Bharat)

By ETV Bharat Karnataka Team

Published : Jan 2, 2025, 4:22 PM IST

ಜಮುಯಿ (ಬಿಹಾರ) :ಶಾಲೆಯಲ್ಲಿ ಮಕ್ಕಳಿಗೆ ವರ್ಷಗಳ ಕಾಲ ಬೋಧಿಸಿದ ನಂತರ ಶಿಕ್ಷಕರು ನಿವೃತ್ತಿಯಾಗುವುದು ವಾಡಿಕೆ. ಆದರೆ, ಇಲ್ಲೊಬ್ಬ ಶಿಕ್ಷಕಿ ಇಂತಹ ಅನುಭೂತಿಯನ್ನು ಪಡೆಯುವ ಮೊದಲೇ ನಿವೃತ್ತರಾಗಿದ್ದಾರೆ. ಇಲ್ಲಿ ಟ್ವಿಸ್ಟ್​ ಏನಂದರೆ, ಅವರು ಸರ್ಕಾರಿ ಶಾಲಾ ಬೋಧಕಿಯಾಗಿ ಒಂದು ದಿನವೂ ಮಕ್ಕಳಿಗೆ ಪಾಠ ಮಾಡಿಲ್ಲ!

ಅರೆ, ಇದೇನು ವಿಚಿತ್ರ ಅಂತೀರಾ. ಹೌದು, ಬಿಹಾರದ ಅನಿತಾ ಕುಮಾರಿ ಎಂಬವರು ಸರ್ಕಾರಿ ಹುದ್ದೆಗೆ ನೇಮಕವಾದ ಮರುದಿನವೇ ವಯೋಸಹಜವಾಗಿ ನಿವೃತ್ತಿಯಾಗಿದ್ದಾರೆ. ಇದು ಎಲ್ಲರ ಅಚ್ಚರಿಗೂ ಕಾರಣವಾಗಿದೆ.

ನೇಮಕ- ನಿವೃತ್ತಿಗೆ ಒಂದೇ ದಿನ ಅಂತರ:ಅನಿತಾ ಕುಮಾರಿ ಅವರು ಜಮುಯಿ ಜಿಲ್ಲೆಯ ಖೈರಾ ಬ್ಲಾಕ್​ನ ಹಿರಿಯ ಮಾಧ್ಯಮಿಕ ಸರ್ಕಾರಿ ಶಾಲೆಯಲ್ಲಿ ಖಾಸಗಿ ಶಿಕ್ಷಕಿಯಾಗಿ 2006 ರಿಂದ ಬೋಧನೆ ಮಾಡುತ್ತಿದ್ದರು. 2024 ರ ಮಾರ್ಚ್​ 6 ರಂದು ಶಿಕ್ಷಕರ ಅರ್ಹತಾ ಪರೀಕ್ಷೆ (TET)ಯನ್ನು ಪಾಸು ಮಾಡಿದ್ದಾರೆ. ಬಳಿಕ ನಡೆದ ಮುಖ್ಯ ಪರೀಕ್ಷೆಯಲ್ಲೂ ಅವರು ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಇದರಿಂದ ಅವರು ಸರ್ಕಾರಿ ಹುದ್ದೆ ಸಿಕ್ಕ ಖುಷಿಯಲ್ಲಿದ್ದರು.

ಶಿಕ್ಷಕಿ ಅನಿತಾ ಕುಮಾರಿ ಅವರಿಗೆ ಬೀಳ್ಕೊಡುಗೆ (ETV Bharat)

ಇಂತಿಪ್ಪ, ಸರ್ಕಾರವು ಆಯ್ಕೆಯಾದ ಅನಿತಾ ಅವರಿಗೆ 2024ರ ಡಿಸೆಂಬರ್​ 30 ರಂದು ನೇಮಕಾತಿ ಪತ್ರ ನೀಡಿದೆ. ಇನ್ನೇನು ಅವರು ನಿಗದಿ ಮಾಡಿದ ಶಾಲೆಗೆ ಶಿಕ್ಷಕಿಯಾಗಿ ವರದಿ ಮಾಡಿಕೊಳ್ಳಬೇಕಿತ್ತು. ಆದರೆ, 60 ವರ್ಷ ತುಂಬಿದ ಕಾರಣ ಮರುದಿನ ಅಂದರೆ, ಡಿಸೆಂಬರ್​ 31 ರಂದು ನಿವೃತ್ತಿಯಾಗಿದ್ದಾರೆ. ಇದು ಸ್ವತಃ ಅನಿತಾ ಅವರಿಗೇ ಗೊಂದಲ ಉಂಟು ಮಾಡಿದೆ.

ಹುದ್ದೆಗೆ ಸೇರುವ ಮೊದಲೇ ಬೀಳ್ಕೊಡುಗೆ:ನೇಮಕಾತಿ ಪತ್ರದ ಆಧಾರದ ಮೇಲೆ, ಅನಿತಾ ಕುಮಾರಿ ಜನವರಿ 1 ರಿಂದ 7 ರೊಳಗೆ ನಿಗದಿತ ಶಾಲೆಗೆ ವರದಿ ಮಾಡಿಕೊಳ್ಳಬೇಕಿತ್ತು. ಆದರೆ, ಅದಕ್ಕೂ ಮೊದಲೇ ನಿವೃತ್ತಿ ಆದೇಶ ಬಂದಿದೆ. ಇದರಿಂದ ಅವರು ಹುದ್ದೆಗೆ ಸೇರುವ ಮೊದಲೇ ಬೀಳ್ಕೊಡುಗೆ ಪಡೆದುಕೊಳ್ಳುವಂತಾಗಿದೆ.

ಇದು ನನ್ನ ದೌರ್ಭಾಗ್ಯ:ಈಟಿವಿ ಭಾರತ್ ಜೊತೆ ಮಾತನಾಡಿದ ಅನಿತಾ ಕುಮಾರಿ ಅವರು, ನಾನು ಸರ್ಕಾರಿ ಶಾಲೆಯಲ್ಲಿ ಖಾಸಗಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದೇನೆ. ಪ್ರಯತ್ನಗಳ ಬಳಿಕ ನೇಮಕಗೊಂಡಿದ್ದೆ. ಆದರೆ, ಮರು ದಿನವೇ ವಯೋಸಹಜ ನಿವೃತ್ತಿ ಹೊಂದಿದ್ದೇನೆ. ನಾನು ಸರ್ಕಾರಿ ಹುದ್ದೆಗೇರಲು ಸಾಧ್ಯವಾಗದೇ ಇರುವುದು ದುರ್ದೈವ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅನಿತಾ ಕುಮಾರಿ ಅವರಿಗೆ 60 ವರ್ಷ ದಾಟಿದ್ದರಿಂದ ಇಲಾಖಾ ನಿಯಮಗಳ ಪ್ರಕಾರ ನಿವೃತ್ತರಾಗಿದ್ದಾರೆ. ಡಿಸೆಂಬರ್ 30 ರಂದು ನೇಮಕ ಪತ್ರ ಪಡೆದು, ಡಿಸೆಂಬರ್ 31 ರಂದು ನಿವೃತ್ತರಾಗಿದ್ದಾರೆ ಎಂಬುದು ಖಂಡಿತವಾಗಿಯೂ ವಿಚಿತ್ರ ಮತ್ತು ವಿಷಾದನೀಯ. ಅವರನ್ನು ಸನ್ಮಾನಿಸಿ ಬೀಳ್ಕೊಡಲಾಗಿದೆ ಎಂದು ಶೋಭಾಖಾನ್ ಖೈರಾ ಪ್ರೌಢಶಾಲೆಯ ಪ್ರಾಂಶುಪಾಲ ನಿರ್ಭಯ್ ಕುಮಾರ್ ಹೇಳಿದ್ದಾರೆ.

ಬಿಇಒ ಹೇಳಿದ್ದೇನು?:ಈ ಕುರಿತು ಖೈರಾ ಬ್ಲಾಕ್ ಶಿಕ್ಷಣಾಧಿಕಾರಿ ಮಹೇಶ್ ಕುಮಾರ್ ಮಾತನಾಡಿದ್ದು, ಶಿಕ್ಷಣ ಇಲಾಖೆಯ ನಿಯಮಗಳ ಪ್ರಕಾರ ಯಾವುದೇ ಶಿಕ್ಷಕರು 60 ವರ್ಷಕ್ಕೆ ನಿವೃತ್ತರಾಗುತ್ತಾರೆ. ಅನಿತಾ ಕುಮಾರಿ ಅವರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ನೇಮಕಾತಿ ಪತ್ರವನ್ನು ಪಡೆದರು. ಆದರೆ, 60 ವರ್ಷ ತುಂಬಿದ್ದರಿಂದ ಅವರು ಹೊಸ ಶಾಲೆಗೆ ಸೇರುವ ಮೊದಲೇ ನಿವೃತ್ತರಾಗಿದ್ದಾರೆ. ಇದು ಕಾಕತಾಳೀಯ ಅಷ್ಟೆ ಎಂದಿದ್ದಾರೆ.

ಇದನ್ನೂ ಓದಿ:ಚೀನಾದ ಮಾಂಜ ದಾರಕ್ಕೆ ಹರಿದ್ವಾರದಲ್ಲಿ ವ್ಯಕ್ತಿ ಬಲಿ

ABOUT THE AUTHOR

...view details