ಚೆನ್ನೈ: ಮಹಿಳೆಯನ್ನು ಕೊಂದು ಆಕೆಯ ಶವವನ್ನು ಸೂಟ್ಕೇಸ್ನಲ್ಲಿ ತುಂಬಿ ಆಂಧ್ರ ಪ್ರದೇಶದ ನೆಲ್ಲೂರಿನಿಂದ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದ ತಂದೆ, ಮಗಳನ್ನು ತಮಿಳುನಾಡಿನ ಕೊರಕ್ಕುಪೆಟ್ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ವೃತ್ತಿಯಲ್ಲಿ ಅಕ್ಕಸಾಲಿಗನಾಗಿರುವ 43 ವರ್ಷದ ಬಾಲಸುಬ್ರಮಣ್ಯಂ ಮತ್ತು ಆತನ 17 ವರ್ಷದ ಮಗಳನ್ನು ಮಿನ್ಜುರ್ ರೈಲ್ವೆ ನಿಲ್ದಾಣದಲ್ಲಿ ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆಯ ವಿವರ: ನೆಲ್ಲೂರಿನಿಂದ ರೈಲು ಹತ್ತಿದ್ದ ಅಪ್ಪ, ಮಗಳು ತಮಿಳುನಾಡಿದ ಮಿನಿಜುರ್ ರೈಲ್ವೆ ನಿಲ್ದಾಣದಲ್ಲಿ ಸೂಟ್ಕೇಸ್ ಸಮೇತ ಕೆಳಗಿಳಿದಿದ್ದಾರೆ. ಬಳಿಕ ಸೂಟ್ಕೇಸ್ ಅನ್ನು ನಿಲ್ದಾಣದಲ್ಲಿಯೇ ಬಿಟ್ಟು, ಅವರು ಮಾತ್ರ ರೈಲು ಹತ್ತಿ ಕುಳಿತಿದ್ದಾರೆ. ಸೂಟ್ಕೇಸ್ನಲ್ಲಿ ರಕ್ತ ಕಂಡ ಜನರು ತಕ್ಷಣ ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್)ಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಕಾರ್ಯಪ್ರವೃತ್ತರಾದ ಆರ್ಪಿಎಫ್ ಸಿಬ್ಬಂದಿ, ಅಪ್ಪ-ಮಗಳನ್ನು ತಡೆದು ನಿಲ್ಲಿಸಿ, ಈ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ತಾವು ನೆಲ್ಲೂರಿನ ಸಂದಪೆಟ್ಟೈ ಮೂಲದವರು ಎಂದು ತಿಳಿಸಿದ್ದಾರೆ.
ಪೊಲೀಸರ ವಿಚಾರಣೆಯ ಆರಂಭದಲ್ಲಿ, ಕೊಲೆಯಾದ ಮಹಿಳೆ ತನ್ನ ಮಗಳನ್ನು ಲೈಂಗಿಕ ಕಾರ್ಯಕರ್ತೆಯ ಕೆಲಸಕ್ಕೆ ಬಲವಂತಪಡಿಸಿದ್ದಳು. ಈ ಹಿನ್ನೆಲೆಯಲ್ಲಿ ಹತ್ಯೆ ಮಾಡಿದ್ದಾಗಿ ಬಾಲಸುಬ್ರಮಣ್ಯಂ ತಿಳಿಸಿದ್ದ. ಆದರೆ ಈ ಹೇಳಿಕೆ ಅನುಮಾನ ಮೂಡಿಸಿದ ಕಾರಣ ಆರ್ಪಿಎಫ್ ಸಿಬ್ಬಂದಿ ಕೊರುಕ್ಕುಪೆಟ್ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಸೂಟ್ಕೇಸ್ ವಶಕ್ಕೆ ಪಡೆದು ತೆರೆದಿದ್ದಾರೆ. ಈ ವೇಳೆ ಅದರಲ್ಲಿರುವುದು ನೆಲ್ಲೂರಿನ 65 ವರ್ಷದ ಮನ್ನಮ್ ರಮಣಿ ಎಂಬಾಕೆಯ ಮೃತದೇಹ ಎಂದು ಪತ್ತೆ ಮಾಡಿದ್ದಾರೆ.
ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದಾಗ, ಮಹಿಳೆಯ ಆಭರಣ ಕದಿಯಲು ಮುಂದಾದಾಗ ಕೊಲೆ ನಡೆಸಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ನೆಲ್ಲೂರಿನಲ್ಲಿ ರಮಣಿಯನ್ನು ಮನೆಗೆ ಆಹ್ವಾನಿಸಿದ ತಂದೆ, ಮಗಳು ನಂತರ ಆಕೆಯ ಮುಖವನ್ನು ಬೆಡ್ಶೀಟ್ನಲ್ಲಿ ಮುಚ್ಚಿ ಹಲ್ಲೆಗೈದು ಸಾಯಿಸಿ, ಕಿವಿ ಓಲೆ, ತಾಳಿ ಮತ್ತು ಚಿನ್ನದ ಸರ ಪಡೆದು, ಬಳಿಕ ಶವ ಸಾಗಿಸುತ್ತಿದುದಾಗಿ ತಿಳಿಸಿದ್ದಾರೆ.
ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಸ್ಟಾನ್ಲಿ ಆಸ್ಪತ್ರೆಗೆ ರವಾನಿಸಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ:ಬಿಜೆಪಿ ಮುಖಂಡನ ಶಾಲೆಯ ಪ್ರಾಂಶುಪಾಲರನ್ನ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು: ದೃಶ್ಯ ಸಿಸಿಟಿವಿಯಲ್ಲಿ ಸೆರೆ