ಹರಿಯಾಣ:ಪಂಜಾಬ್ ಮತ್ತು ಹರಿಯಾಣ ರೈತರು ನಡೆಸುತ್ತಿರುವ 'ದಿಲ್ಲಿ ಚಲೋ' ಹೋರಾಟ ತೀವ್ರತೆ ಪಡೆದುಕೊಳ್ಳುತ್ತಿದೆ. ಶಂಭು ಗಡಿಯಲ್ಲಿ ನಿಹಾಂಗ್ ಸಿಖ್ಖರು ಕತ್ತಿ ಝಳಪಿಸುತ್ತಿರುವ ಮತ್ತು ಖಲಿಸ್ತಾನಿ ಉಗ್ರ ಭಿಂದ್ರನ್ ವಾಲೆ ಚಿತ್ರ ಹೋರಾಟದಲ್ಲಿ ಕಂಡುಬಂದಿದೆ. ಇದು 2021ರ ಹೋರಾಟದಲ್ಲಿ ನಡೆದ ಹಿಂಸಾಚಾರವನ್ನು ಮರುಕಳಿಸುವ ಸೂಚನೆ ನೀಡಿದೆ. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಪಂಜಾಬ್ ಮತ್ತು ಹರಿಯಾಣದ ಹಲವು ಗಡಿಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರೈತರು ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಲಾಗುತ್ತಿದೆ. ಇದರಿಂದ ಸಂಘರ್ಷ ವಾತಾವರಣ ಉಂಟಾಗಿದೆ. ಒಂದೆಡೆ ರೈತ ನಾಯಕರು ಶಾಂತಿಯುತ ಹೋರಾಟ ನಡೆಸಲಾಗುತ್ತಿದೆ ಎಂದು ಹೇಳುತ್ತಿದ್ದರೆ, ಪ್ರತಿಭಟನಾಕಾರರು ತೀವ್ರತೆಯನ್ನು ಪ್ರದರ್ಶಿಸುತ್ತಿದ್ದಾರೆ.
ಇಂದು ಮತ್ತೊಂದು ಸಭೆ:ರೈತರ ಬೇಡಿಕೆಗಳನ್ನು ಆಲಿಸಲು ಕೇಂದ್ರ ಸರ್ಕಾರ ಭಾನುವಾರ 4ನೇ ಸುತ್ತಿನ ಮಾತುಕತೆ ನಡೆಸಲಿದೆ. ಈವರೆಗೂ ನಡೆದ ಮೂರು ಸಭೆಗಳಲ್ಲಿ ಯಾವುದೇ ಫಲಪ್ರದ ನಿರ್ಧಾರಗಳು ತಳೆಯದ ಕಾರಣ ಇಂದಿನ ಸಭೆ ಮಹತ್ವ ಪಡೆದುಕೊಂಡಿದೆ.
ಇಂಟರ್ನೆಟ್ ನಿರ್ಬಂಧ ಮುಂದುವರಿಕೆ:ರೈತ ಹೋರಾಟ ಆರಂಭವಾದ ದಿನದಿಂದ ಅಮಾನತಿನಲ್ಲಿರುವ ಮೊಬೈಲ್ ಇಂಟರ್ನೆಟ್, ಸಂದೇಶ ರವಾನೆ ಸೇವೆಯನ್ನು ಫೆಬ್ರವರಿ 19ರ ವರೆಗೆ ನಿರ್ಬಂಧಿಸಿ ವಿಸ್ತರಿಸಲಾಗಿದೆ. ಈ ಹಿಂದೆ ಫೆಬ್ರವರಿ 13 ರಿಂದ ಫೆಬ್ರವರಿ 15 ರವರೆಗೆ ಮೊಬೈಲ್ ಇಂಟರ್ನೆಟ್ ನಿರ್ಬಂಧ ಹೇರಲಾಗಿತ್ತು.
ದೆಹಲಿಯ ಗಡಿ ಪ್ರದೇಶಗಳಲ್ಲಿ ರೈತರು ತೀವ್ರ ಸ್ವರೂಪದಲ್ಲಿ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮುನ್ನೆಚ್ಚರಿಕಾ ಕ್ರಮ, ಯಾವುದೇ ಹಿಂಸಾಚಾರ ಮತ್ತು ಸುಳ್ಳು ಮಾಹಿತಿ ಹಬ್ಬದಂತೆ ತಡೆಯಲು ಅಂತರ್ಜಾಲ ಸೇವೆಯನ್ನು ಹರಿಯಾಣದ 7 ಜಿಲ್ಲೆಗಳಲ್ಲಿ ನಿರ್ಬಂಧ ವಿಧಿಸಲಾಗಿದೆ. ಅಂಬಾಲಾ, ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸಾರ್, ಫತೇಹಾಬಾದ್ ಮತ್ತು ಸಿರ್ಸಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ಧ್ವನಿ ಕರೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
ಎಲ್ಲ ಬೆಳೆಗಳಿಗೆ ಎಂಎಸ್ಪಿ ಸಾಧ್ಯವಿಲ್ಲ:ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಮಾನ್ಯತೆ ಮತ್ತು ಬೆಲೆ ವ್ಯವಸ್ಥೆ ಸೇರಿದಂತೆ ಸ್ವಾಮಿನಾಥನ್ ಸಮಿತಿಯ ವರದಿಯ ಅನುಷ್ಠಾನಕ್ಕೆ ಆಗ್ರಹಿಸಿ ರೈತರು ನಡೆಸುತ್ತಿರುವ ಆಂದೋಲನದ ಕುರಿತು ಪ್ರಮುಖ ಕೃಷಿ ಅರ್ಥಶಾಸ್ತ್ರಜ್ಞ ಡಾ.ಸರ್ದಾರಾ ಸಿಂಗ್ ಜೋಲ್ ಅವರು ತುಸು ಬೇಸರ ವ್ಯಕ್ತಪಡಿಸಿದ್ದಾರೆ.
ಎಲ್ಲಾ ಬೆಳೆಗಳಿಗೆ ಎಂಎಸ್ಪಿ ನೀಡುವುದು ಪ್ರಾಯೋಗಿಕವಾಗಿ ಸಾಧುವಲ್ಲದ ಕೆಲಸವಾಗಿದೆ. ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಂಧಾನಕ್ಕೂ ಸಿದ್ಧರಾಗಬೇಕು. ಯಾವೆಲ್ಲಾ ಬೆಳೆಗಳಿಗೆ ಎಂಎಸ್ಪಿ ನೀಡಲು ಸಾಧ್ಯವೋ ಅದನ್ನು ಸರ್ಕಾರವೂ ಅಂಗೀಕರಿಸಬೇಕು. ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಪಂಜಾಬ್ ಕೃಷಿ ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿಗಳೂ ಆದ ಸರ್ದಾರ್ ಸಿಂಗ್ ಸಲಹೆ ನೀಡಿದ್ದಾರೆ.
ಇದನ್ನೂ ಓದಿ:ದೆಹಲಿ ಚಲೋ: ಶಂಭು ಗಡಿಯಲ್ಲಿ ನಿತ್ರಾಣಗೊಂಡು ಪಿಎಸ್ಐ, ಹೃದಯಾಘಾತಕ್ಕೆ ರೈತ ಸಾವು