ನವದೆಹಲಿ:ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರೈತರು ನಡೆಸುತ್ತಿರುವ ದೆಹಲಿ ಚಲೋ ಸಂಘರ್ಷದ ಹಾದಿ ಹಿಡಿದಿದೆ. ರಾಷ್ಟ್ರ ರಾಜಧಾನಿಗೆ ಬರದಂತೆ ಗಡಿಗಳಲ್ಲಿ ಪೊಲೀಸರು ತಡೆವೊಡ್ಡುತ್ತಿದ್ದರೆ, ಇದಕ್ಕೆ ರೈತರು ಕೂಡ ತೀವ್ರ ಪ್ರತಿರೋಧ ಒಡ್ಡುತ್ತಿದ್ದಾರೆ. ಪ್ರತಿಭಟನೆ ಮೂರನೇ ದಿನಕ್ಕೆ ತಲುಪಿದ್ದು, ಕೇಂದ್ರ ಸರ್ಕಾರ ಮತ್ತೊಂದು ಸುತ್ತಿನ ಮಾತುಕತೆಗೆ ರೈತ ಮುಖಂಡರನ್ನ ಆಹ್ವಾನಿಸಿದೆ.
ಫೆಬ್ರವರಿ 8 ಮತ್ತು 12 ರಂದು ನಡೆಸಿದ ಎರಡು ಮಾತುಕತೆಗಳು ಫಲ ಕಂಡಿಲ್ಲ. ಇದರಿಂದ ಒಂದು ವಾರದಲ್ಲಿ ಮೂರನೇ ಸುತ್ತಿನ ಮಾತುಕತೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಮತ್ತು ಸಾಲ ಮನ್ನಾ ಸೇರಿದಂತೆ ತಮ್ಮ ಹಲವು ಬೇಡಿಕೆಗಳನ್ನು ರೈತರ ಮುಖಂಡರು ಕೇಂದ್ರದ ಮುಂದೆ ಇಟ್ಟಿದ್ದಾರೆ.
ಇಂದು ಹೈಕೋರ್ಟ್‌ನಲ್ಲಿ ವಿಚಾರಣೆ:ಪಂಜಾಬ್ ಮತ್ತು ಹರಿಯಾಣದ ರೈತರು ದೆಹಲಿ ಚಲೋ ತಡೆಯುವ ಮತ್ತು ಪ್ರತಿಭಟನೆಗೆ ಸ್ವಾತಂತ್ರ್ಯ ನೀಡುವಂತೆ ಕೋರಿ ಸಲ್ಲಿಸಲಾದ ಎರಡು ಅರ್ಜಿಗಳನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಗುರುವಾರ ವಿಚಾರಣೆ ನಡೆಸಲಿದೆ. ಈ ಹಿಂದಿನ ವಿಚಾರಣೆಯಲ್ಲಿ ನವೀಕರಿಸಿದ ವರದಿ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿತ್ತು. ಜೊತೆಗೆ ಪಂಜಾಬ್, ಹರಿಯಾಣ, ದೆಹಲಿ ಮತ್ತು ಕೇಂದ್ರ ಸರ್ಕಾರಕ್ಕೂ ನೋಟಿಸ್ ಜಾರಿ ಮಾಡಿದೆ.
ಮೂಲ ಹಕ್ಕುಗಳ ನಡುವೆ ಸಮತೋಲನ ಇರಬೇಕು ಎಂದು ಹೈಕೋರ್ಟ್ ಹೇಳಿತ್ತು. ರೈತರು ಮತ್ತು ಜನಸಾಮಾನ್ಯರಿಗೆ ಅವರದ್ದೇ ಆದ ಹಕ್ಕಿದೆ. ಸರ್ಕಾರಗಳು ಸಮಸ್ಯೆಯನ್ನು ಬಗೆಹರಿಸಬೇಕು. ಬಲಪ್ರಯೋಗ ಕೊನೆಯ ಅಸ್ತ್ರವಾಗಬಾರದು.