ಧಾರಶಿವ(ಮಹಾರಾಷ್ಟ್ರ):ಬಿಜೆಪಿ ನೇತೃತ್ವದ ಸರ್ಕಾರವನ್ನು ಎದುರಿಸಲು ಸಾಧ್ಯವಾಗದ ನಮ್ಮ ಎದುರಾಳಿಗಳು ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ನಕಲಿ ವಿಡಿಯೋಗಳನ್ನು ಹರಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಹಾರಾಷ್ಟ್ರದ ಧಾರಶಿವ ಜಿಲ್ಲೆಯಲ್ಲಿಂದು ಲೋಕಸಭೆ ಚುನಾವಣೆ ನಿಮಿತ್ತ ಬಿಜೆಪಿ ಪರ ಪ್ರಚಾರ ಭಾಷಣ ಮಾತನಾಡಿದ ಮೋದಿ, ''ಈಗ ಅವರ (ಪ್ರತಿಪಕ್ಷಗಳು) ಸ್ಥಿತಿ ಹೇಗಿದೆ ಎಂದರೆ, ಅವರ ಸುಳ್ಳುಗಳು ಕೆಲಸ ಮಾಡುತ್ತಿಲ್ಲ. ಹಾಗಾಗಿ ನನ್ನ ಮುಖವನ್ನು ಬಳಸಿಕೊಂಡು ಕೃತಕ ಬುದ್ಧಿಮತ್ತೆಯ ಸಹಾಯದಿಂದ ತಮ್ಮ 'ಮೊಹಬ್ಬತ್ ಕಿ ದುಕಾನ್' (ಪ್ರೀತಿಯ ಅಂಗಡಿ)ನಲ್ಲಿ ನಕಲಿ ವಿಡಿಯೋಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಸುಳ್ಳಿನ ಅಂಗಡಿಯನ್ನು ಮುಚ್ಚಬೇಕು'' ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
''ನನ್ನಂತಹ ನಾಯಕರ ಹೇಳಿಕೆಗಳನ್ನೂ ತಿರುಚಲು ವಿರೋಧಿಗಳು ಕೃತಕ ಬುದ್ಧಿಮತ್ತೆಯನ್ನು ಬಳಸುತ್ತಿದ್ದಾರೆ'' ಎಂದು ಹೇಳಿದ ಮೋದಿ, ''ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯು ದೇಶದ ಸ್ವಾಭಿಮಾನಕ್ಕೆ ಸಂಬಂಧಿಸಿದ್ದು. ಯಾವುದೇ ಕ್ಷಣದಲ್ಲಿ ಪತನಗೊಳ್ಳಬಹುದಾದ ದುರ್ಬಲ ಸರ್ಕಾರವು ಬಲಿಷ್ಠ ರಾಷ್ಟ್ರವನ್ನು ನಿರ್ಮಿಸುತ್ತದೆಯೇ'' ಎಂದು ಅವರು ಪ್ರಶ್ನಿಸಿದರು.
''ವಿಶ್ವದಾದ್ಯಂತ ರಾಗಿಯನ್ನು ಜನಪ್ರಿಯಗೊಳಿಸುವುದು ಮತ್ತು ತೈಲ ಬೀಜ ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವುದು ನಮ್ಮ ಸರ್ಕಾರದ ಗುರಿ. ಪ್ರಪಂಚದಾದ್ಯಂತದ ಡೈನಿಂಗ್ ಟೇಬಲ್‌ಗಳಿಗೆ ರಾಗಿ ತಲುಪುವಂತೆ ನಾನು ಖಚಿತಪಡಿಸುತ್ತೇನೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ನನಗೆ ಆಯೋಜಿಸಿದ್ದ ಭೋಜನಕೂಟದ ಮೆನುವಿನಲ್ಲೂ ರಾಗಿ ಇತ್ತು'' ಎಂದು ಪ್ರಧಾನಿ ಹೇಳಿದರು. ಅಮೆರಿಕ ಪ್ರವಾಸದ ವೇಳೆದ ಮೋದಿ ಅವರಿಗಾಗಿ ಬೈಡನ್ ಭೋಜನಕೂಟ ಆಯೋಜಿಸಿದ್ದರು. ಇದನ್ನು ಉಲ್ಲೇಖಿಸಿ ಈ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:ಹಾಸನ ವಿಡಿಯೋ ಕೇಸಲ್ಲಿ ಕಾಂಗ್ರೆಸ್ ಸರ್ಕಾರ ಇದುವರೆಗೂ ಯಾಕೆ ಕ್ರಮ ಜರುಗಿಸಿಲ್ಲ: ಅಮಿತ್ ಶಾ