ಚೆನ್ನೈ (ತಮಿಳುನಾಡು):ಮಾನವ ಮೆದುಳಿನ ಮೇಲೆ ಸಂಶೋಧನೆ ನಡೆಸುತ್ತಿರುವ ಐಐಟಿ ಮದ್ರಾಸ್‌ನ ಸುಧಾ ಗೋಪಾಲಕೃಷ್ಣನ್ ಬ್ರೈನ್ ಸೆಂಟರ್‌ನ ಸಂಶೋಧನಾ ಕೇಂದ್ರಕ್ಕೆ, ಕೆನಡಾದ ಪ್ರಮುಖ ಹಣಕಾಸು ಕಂಪನಿಯಾದ ಫೇರ್‌ಫ್ಯಾಕ್ಸ್ ಫೈನಾನ್ಶಿಯಲ್ ಹೋಲ್ಡಿಂಗ್ಸ್ ಲಿಮಿಟೆಡ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೇಮ್ ವಾತ್ಸಾ ನೆರವಿನ ಹಸ್ತ ಚಾಚಿದ್ದಾರೆ.
ಸುಧಾ ಗೋಪಾಲಕೃಷ್ಣನ್ ಬ್ರೈನ್ ಸೆಂಟರ್ನಲ್ಲಿ ನಡೆಯುತ್ತಿರುವ ಸಂಶೋಧನೆಗಳು ಮೇಲ್ದರ್ಜೆಯಿಂದ ಕೂಡಿವೆ. ಮಾನವ ಮೆದುಳಿನ ದತ್ತಾಂಶ, ವೈಜ್ಞಾನಿಕ ಸಂಶೋಧನೆ ಮತ್ತು ತಾಂತ್ರಿಕ ಸಾಧನಗಳನ್ನು ಇಲ್ಲಿ ಉತ್ಪಾದಿಸಲಾಗುತ್ತಿದೆ. ಇದನ್ನು ಮೆಚ್ಚಿಕೊಂಡಿರುವ ಪ್ರೇಮ್ ವಾತ್ಸಾ ಅವರು ಸಂಶೋಧನೆಗೆ ನೆರವಾಗಲು 5 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 41 ಕೋಟಿ ರೂ.) ಹಣಕಾಸಿನ ನೆರವು ಘೋಷಿಸಿದ್ದಾರೆ.
ಐಐಟಿ ಮದ್ರಾಸ್‌ನ ಹಳೆ ವಿದ್ಯಾರ್ಥಿಯೂ ಆಗಿರುವ ಪ್ರೇಮ್ ವಾತ್ಸಾ ಅವರು ಕೆನಡಾದಲ್ಲಿ ಹಣಕಾಸು ವ್ಯವಹಾರಗಳ ಕಂಪನಿಯಾದ ಫೇರ್‌ಫ್ಯಾಕ್ಸ್ ಫೈನಾನ್ಶಿಯಲ್ ಹೋಲ್ಡಿಂಗ್ಸ್ ಲಿಮಿಟೆಡ್ ಅನ್ನು ಸ್ಥಾಪಿಸಿದ್ದಾರೆ. 1971ರಲ್ಲಿ ಅವರು ಐಐಟಿ ಮದ್ರಾಸ್‌ನಿಂದ ಕೆಮಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದರು. ಜೊತೆಗೆ ಅವರಿಗೆ 1999ರಲ್ಲಿ ಡಿಸ್ಟಿಂಗ್ವಿಶ್ಡ್ ಅಲುಮ್ನಸ್ ಪ್ರಶಸ್ತಿಯನ್ನು ನೀಡಲಾಗಿದೆ.
ಸಂಶೋಧನೆ ಕಾರ್ಯಕ್ಕೆ ಮೆಚ್ಚುಗೆ:ಈ ಕೇಂದ್ರದಲ್ಲಿ ನಡೆಯುತ್ತಿರುವ ಸಂಶೋಧನೆಯನ್ನು ಶ್ಲಾಘಿಸಿದ ಪ್ರೇಮ್ ವಾತ್ಸಾ ಅವರು, ಐಐಟಿ ಮದ್ರಾಸ್‌ನ ಸುಧಾ ಗೋಪಾಲಕೃಷ್ಣನ್ ಬ್ರೈನ್ ಸೆಂಟರ್‌ನಲ್ಲಿನ ಕೆಲಸದ ಗುಣಮಟ್ಟ ಮತ್ತು ತಂಡದ ಬದ್ಧತೆ ನಿಜವಾಗಿಯೂ ಅತ್ಯುತ್ತಮವಾಗಿದೆ. ಮಾನವ ಮೆದುಳಿನ ಅಪರೂಪದ ಸಂಶೋಧನೆಗಳನ್ನು ನಡೆಸುತ್ತಿದೆ. ಇದು ಮೆದುಳಿನ ಬಗ್ಗೆ ಹೆಚ್ಚಿನ ಜ್ಞಾನವನ್ನು ಬಿತ್ತರಿಸುವ ಜೊತೆಗೆ, ದೂರಗಾಮಿ ಪರಿಣಾಮವನ್ನು ಹೊಂದಿದೆ. ಇದು ಮೆದುಳಿನ ಕಾಯಿಲೆಗಳಿಗೆ ಪರಿಹಾರಗಳನ್ನು ರೂಪಿಸುವುದಕ್ಕೂ ನೆರವು ನೀಡಲಿದೆ ಎಂದು ಹೇಳಿದ್ದಾರೆ.