ನವದೆಹಲಿ:ದೇಶದ ಸ್ವಾತಂತ್ರ್ಯ ಚಳವಳಿಗೆ ಕಾಂಗ್ರೆಸ್ ಕೊಡುಗೆ ನೀಡಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಶ್ಲಾಘಿಸಿರುವ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನು ಇತ್ತೀಚಿನ ಹೇಳಿಕೆ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ, 2018ರಲ್ಲಿ ಭಾಗವತ್ ಮಾತನಾಡಿದ ಹಳೆಯ ವಿಡಿಯೋ ಇದಾಗಿದೆ. ಈಗ ಮತ್ತೆ ಇದೇ ವಿಡಿಯೋ ಹಂಚಿಕೊಂಡು ತಪ್ಪುದಾರಿಗೆ ಎಳೆಯಲಾಗುತ್ತಿದೆ ಎಂದು ಸುದ್ದಿಸಂಸ್ಥೆ ಪಿಟಿಐ ಫ್ಯಾಕ್ಟ್ ಚೆಕ್ನಲ್ಲಿ ದೃಢಪಟ್ಟಿದೆ.
ಮೇ 22ರಂದು ಫೇಸ್‌ಬುಕ್ ಬಳಕೆದಾರರು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ದೇಶದ ಸ್ವಾತಂತ್ರ್ಯ ಚಳವಳಿಗೆ ನೀಡಿದ ಕೊಡುಗೆಗಾಗಿ ಕಾಂಗ್ರೆಸ್ ಪಕ್ಷವನ್ನು ಶ್ಲಾಘಿಸುವುದನ್ನು ಕೇಳಬಹುದು. ಈ ವಿಡಿಯೋ ಪೋಸ್ಟ್ ಮಾಡಿ ''ಮೋಹನ್ ಭಾಗವತ್ ಕಾಂಗ್ರೆಸ್ ಪಕ್ಷವನ್ನು ಹೊಗಳಿದ್ದಾರೆ'' ಎಂದು ಶೀರ್ಷಿಕೆ ನೀಡಲಾಗಿದೆ. ಇದೇ ವಿಡಿಯೋವನ್ನು ಹಲವರು ಪೋಸ್ಟ್ ಮಾಡಿದ್ದಾರೆ.
ಈ ಬಗ್ಗೆ ಪಿಟಿಐ ಫ್ಯಾಕ್ಟ್ ಚೆಕ್ ಡೆಸ್ಕ್ ಪರಿಶೀಲನೆ ಮಾಡಿದಾಗ 2018ರಲ್ಲಿ ಭಾಗವತ್ ಮಾತನಾಡಿದ ಹಳೆಯ ವಿಡಿಯೋ ಇದಾಗಿದೆ. 2018ರ ಸೆಪ್ಟೆಂಬರ್ 18ರಂದು ಇಂಡಿಯನ್ ಎಕ್ಸ್‌ಪ್ರೆಸ್‌ನ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಈ ವಿಡಿಯೋ ಅಪ್‌ಲೋಡ್ ಮಾಡಿರುವುದು ಪತ್ತೆಯಾಗಿದೆ. ''ಈ ದೇಶದ ಜನರನ್ನು ಸ್ವಾತಂತ್ರ್ಯದ ಹಾದಿಯಲ್ಲಿ ಒಟ್ಟಿಗೆ ತರುವಲ್ಲಿ ಕಾಂಗ್ರೆಸ್‌ನ ಸಿದ್ಧಾಂತ ಪ್ರಮುಖ ಪಾತ್ರ ವಹಿಸಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ'' ಎಂದು ಶೀರ್ಷಿಕೆ ನೀಡಿ ಅಂದು ವಿಡಿಯೋ ಹಂಚಿಕೊಳ್ಳಲಾಗಿದೆ.