ಕರ್ನಾಟಕ

karnataka

ETV Bharat / bharat

ಉತ್ತರಾಖಂಡ ಸರ್ಕಾರಕ್ಕೆ ಏಕರೂಪ ನಾಗರಿಕ ಸಂಹಿತೆಯ ಅಂತಿಮ ಕರಡು ಸಲ್ಲಿಕೆ - ಯುಸಿಸಿ

Uniform Civil Code: ಏಕರೂಪ ನಾಗರಿಕ ಸಂಹಿತೆಯ ಅಂತಿಮ ಕರಡನ್ನು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸ್ವೀಕರಿಸಿದ್ದಾರೆ. ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ರಂಜನಾ ದೇಸಾಯಿ ಅಧ್ಯಕ್ಷತೆಯ ಐವರು ಸದಸ್ಯರ ತಜ್ಞರ ಸಮಿತಿ ಈ ಕರಡು ಸಿದ್ಧಪಡಿಸಿದ್ದು, ಶುಕ್ರವಾರ ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಿತು.

ಉತ್ತರಾಖಂಡ ಸಿಎಂಗೆ ಬಹುಚರ್ಚಿತ ಏಕರೂಪ ನಾಗರಿಕ ಸಂಹಿತೆಯ ಕರಡು ಸಲ್ಲಿಕೆ
ಉತ್ತರಾಖಂಡ ಸಿಎಂಗೆ ಬಹುಚರ್ಚಿತ ಏಕರೂಪ ನಾಗರಿಕ ಸಂಹಿತೆಯ ಕರಡು ಸಲ್ಲಿಕೆ

By ETV Bharat Karnataka Team

Published : Feb 2, 2024, 1:18 PM IST

ಡೆಹ್ರಾಡೂನ್​​: ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ಅಂತಿಮ ಕರಡನ್ನು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ತಜ್ಞರ ಸಮಿತಿ ಸಲ್ಲಿಸಿತು.

''ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಉದ್ದೇಶಕ್ಕಾಗಿ ಕರಡು ಸಿದ್ಧಪಡಿಸಲು ರಚಿಸಲಾದ ಸಮಿತಿಯು ಶುಕ್ರವಾರ ಕರಡು ಸಲ್ಲಿಸಿದೆ'' ಎಂದು ಸಿಎಂ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.

''ಕರಡನ್ನು ಪರಿಶೀಲಿಸಿದ ಬಳಿಕ ರಾಜ್ಯದಲ್ಲಿ ಜಾರಿಗೊಳಿಸುವ ದಿಸೆಯಲ್ಲಿ ಮುನ್ನಡೆಯುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರ 'ಏಕ್ ಭಾರತ್, ಶ್ರೇಷ್ಠ ಭಾರತ್' ಯೋಜನೆಯ ಭಾಗವಾಗಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ನಮ್ಮ ಸರ್ಕಾರ ಬದ್ಧವಾಗಿದೆ. ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ವಿಧೇಯಕ ಮಂಡಿಸಲಾಗುವುದು'' ಎಂದು ಧಾಮಿ ತಿಳಿಸಿದ್ದಾರೆ.

"ಸಮಿತಿ ನೀಡಿದ ಕರಡನ್ನು ಕಾನೂನು ಮಾಡಲು ಅಗತ್ಯವಿರುವ ಪ್ರಕ್ರಿಯೆಗೆ ತೆಗೆದುಕೊಳ್ಳಲಾಗುವುದು. ಸಚಿವ ಸಂಪುಟ ಸಭೆಯೂ ನಡೆಯಲಿದೆ. ಅಲ್ಲಿಯೂ ಚರ್ಚಿಸುತ್ತೇವೆ. ಫೆಬ್ರವರಿ 5ರಂದು ಅಧಿವೇಶನ ಆರಂಭವಾಗಲಿದೆ. ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಿ ಅಂಗೀಕರಿಸಲಾಗುವುದು" ಎಂದು ಧಾಮಿ ಮಾಹಿತಿ ನೀಡಿದ್ದಾರೆ. ಸಂಹಿತೆಯ ಕರಡು ಹಸ್ತಾಂತರ ಹಿನ್ನೆಲೆಯಲ್ಲಿ ಸಿಎಂ ಅಧಿಕೃತ ನಿವಾಸದ ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಉತ್ತರಾಖಂಡ ಸರ್ಕಾರವು 27 ಮೇ 2022ರಂದು ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದಲ್ಲಿ ಏಕರೂಪ ನಾಗರಿಕ ಸಂಹಿತೆ ಕುರಿತು ಸಮಿತಿಯನ್ನು ರಚಿಸಿತ್ತು. 2022ರ ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯದ ಜನರಿಗೆ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವ ಭರವಸೆ ನೀಡಿತ್ತು. ಪ್ರಣಾಳಿಕೆಯಲ್ಲಿಯೂ ಉಲ್ಲೇಖಿಸಿತ್ತು. ಅದರಂತೆ ಸಮಿತಿ ಕರಡು ಪ್ರತಿಯನ್ನು ರಾಜ್ಯ ಸರ್ಕಾರಕ್ಕೆ ಒಪ್ಪಿಸಿದೆ. 2.33 ಲಕ್ಷ ಲಿಖಿತ ಸಲಹೆಗಳನ್ನು ಸ್ವೀಕರಿಸಲಾಗಿದೆ. ಕರಡು ಸಿದ್ಧಪಡಿಸುವ ಸಂದರ್ಭದಲ್ಲಿ ಸಮಿತಿಯು ಸುಮಾರು 60,000 ಜನರೊಂದಿಗೆ ಸಂವಾದ ನಡೆಸಿದೆ. 60 ಸಭೆಗಳನ್ನು ನಡೆಸಿದೆ. 19 ತಿಂಗಳಲ್ಲಿ ಅಂತಿಮ ಕರಡು ಸಿದ್ಧಪಡಿಸಿದೆ.

ಸಿಕ್ಕಿಂ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಪ್ರಮೋದ್ ಕೊಹ್ಲಿ, ಸಮಾಜ ಸೇವಕ ಮನು ಗೌರ್, ಉತ್ತರಾಖಂಡದ ಮಾಜಿ ಮುಖ್ಯ ಕಾರ್ಯದರ್ಶಿ ಶತ್ರುಘ್ನ ಸಿಂಗ್ ಮತ್ತು ಡೂನ್ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಸುರೇಖಾ ದಂಗವಾಲ್ ಅವರನ್ನು ಸಮಿತಿ ಒಳಗೊಂಡಿದೆ.

ಸಮಾಜದ ಪ್ರತಿಯೊಂದು ವರ್ಗದಿಂದ ಸಲಹೆಗಳನ್ನು ಪಡೆಯಲು ತಂತ್ರಜ್ಞಾನದ ಸಹಾಯವನ್ನು ತೆಗೆದುಕೊಂಡಿರುವ ಸಮಿತಿ, ವೆಬ್ ಪೋರ್ಟಲ್​ ಆರಂಭಿಸಿತ್ತು. SMS ಮತ್ತು WhatsApp ಸಂದೇಶಗಳ ಮೂಲಕ ರಾಜ್ಯದ ಎಲ್ಲಾ ನಾಗರಿಕರಿಂದ ಸಲಹೆಗಳನ್ನು ಆಹ್ವಾನಿಸಲಾಗಿತ್ತು. ರಾಜ್ಯದ ಶೇ.10ರಷ್ಟು ಕುಟುಂಬಗಳ ಅಭಿಪ್ರಾಯಗಳನ್ನು ಕರಡಿನಲ್ಲಿ ಸೇರಿಸಲಾಗಿದೆ. ಶೇ.10ರಷ್ಟು ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು ರಾಜಕೀಯ ಇತಿಹಾಸದಲ್ಲಿ ಇದೇ ಮೊದಲು. ಈ ಕಾನೂನು ಜಾರಿಯಾದರೆ ಸ್ವಾತಂತ್ರ್ಯಾ ನಂತರ ಏಕರೂಪ ನಾಗರಿಕ ಸಂಹಿತೆಯನ್ನು ಅಳವಡಿಸಿಕೊಂಡ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಉತ್ತರಾಖಂಡ ಸಾಕ್ಷಿಯಾಗಲಿದೆ.

ಏಕರೂಪ ನಾಗರಿಕ ಸಂಹಿತೆ ಎಂದರೇನು?: ಯಾವುದೇ ಜಾತಿ, ಧರ್ಮ, ಪ್ರಾಂತ್ಯವೆಂಬ ಭೇದ ಮಾಡದೆ ದೇಶದ ಎಲ್ಲರಿಗೂ ಒಂದೇ ಕಾನೂನು ಇರಬೇಕು ಅನ್ನೋದೇ ಏಕರೂಪ ನಾಗರಿಕ ಸಂಹಿತೆ. ಸಂವಿಧಾನದ ಆರ್ಟಿಕಲ್ 44ರ ಆಶಯಕ್ಕೆ ಅನುಗುಣವಾಗಿದೆ. ಇಡೀ ದೇಶಕ್ಕೆ ಏಕರೂಪದ ಕಾನೂನಿನ ಜೊತೆಗೆ ಮದುವೆ, ವಿಚ್ಛೇದನ, ಉತ್ತರಾಧಿಕಾರ, ದತ್ತು ಸ್ವೀಕಾರದ ನಿಯಮಗಳು ಎಲ್ಲಾ ಧಾರ್ಮಿಕ ಸಮುದಾಯಗಳಿಗೆ ಒಂದೇ ಆಗಿರುತ್ತದೆ. ಒಂದು ವೇಳೆ ಏಕರೂಪ ನಾಗರಿಕ ಸಂಹಿತೆ ದೇಶದಲ್ಲಿ ಜಾರಿಗೆ ಬಂದರೆ, ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ಯಾವುದೇ ಧರ್ಮಾಧಾರಿತ ಕಾನೂನುಗಳಿಗೆ ಬೆಲೆ ಇರುವುದಿಲ್ಲ.

ಇದನ್ನೂ ಓದಿ:ಉತ್ತರಾಖಂಡದಲ್ಲಿ ಶೀಘ್ರದಲ್ಲೇ ಏಕರೂಪ ನಾಗರಿಕ ಸಂಹಿತೆ ಜಾರಿ: ಸಿಎಂ ಧಾಮಿ

ABOUT THE AUTHOR

...view details