ಹೈದ್ರಾಬಾದ್:'ಚುನಾವಣಾ ಫಲಿತಾಂಶದ ದಿಕ್ಸೂಚಿ' ಎಂದು ಪರಿಗಣಿಸಲಾಗುವ ಚುನಾವಣೋತ್ತರ ಸಮೀಕ್ಷೆಗಳು ಮತ್ತೆ ಸುಳ್ಳಾಗಿವೆ. ಲೋಕಸಭೆ ಚುನಾವಣೆಯಂತೆಯೇ ಹರಿಯಾಣ ಮತ್ತು ಜಮ್ಮು- ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಮತದಾರರ ನಾಡಿಮಿಡಿತವನ್ನು ನಿಖರವಾಗಿ ಹಿಡಿಯುವಲ್ಲಿ ವಿಫಲವಾಗಿದ್ದು, ಮತಗಟ್ಟೆ ಸಮೀಕ್ಷೆಗಳ ಲೆಕ್ಕಾಚಾರ ಬುಡಮೇಲಾಗಿವೆ.
ಹರಿಯಾಣದಲ್ಲಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ, ಜಮ್ಮು- ಕಾಶ್ಮೀರದಲ್ಲಿ ಅತಂತ್ರ ಫಲಿತಾಂಶ ಬರಲಿದೆ ಎಂದು ಹಲವು ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಈಗ ಎಲ್ಲವೂ ಸುಳ್ಳಾಗಿವೆ. ಪ್ರಕಟವಾಗುತ್ತಿರುವ ಫಲಿತಾಂಶದ ಪ್ರಕಾರ, ಹರಿಯಾಣದಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೇರಲು ಸಜ್ಜಾಗಿದೆ. ಇತ್ತ ಕೇಂದ್ರಾಡಳಿತ ಪ್ರದೇಶದಲ್ಲಿ ನ್ಯಾಷನಲ್ ಕಾನ್ಫ್ರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿ ಸ್ಪಷ್ಟ ಬಹುಮತದತ್ತ ದಾಪುಗಾಲಿಟ್ಟಿದೆ.
ಎಕ್ಸಿಟ್ಪೋಲ್ ಹೇಳಿದ್ದೇನು?:ಇಂಡಿಯಾ ಟುಡೇ-ಸಿ ವೋಟರ್, ರಿಪಬ್ಲಿಕ್ ಮ್ರಾಟ್ರಿಝ್, ರಿಪಬ್ಲಿಕ್ ಪಿಮಾರ್ಕ್, ಎಕ್ಸಿಸ್ ಮೈ ಇಂಡಿಯಾ, ಪೀಪಲ್ಸ್ ಪಲ್ಸ್ ಸೇರಿದಂತೆ ಬಹುತೇಕ ಸಮೀಕ್ಷೆಗಳು ಈ ಬಾರಿಯ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ 45ರಿಂದ 60 ಸ್ಥಾನಗಳನ್ನು ಪಡೆಯುತ್ತದೆ. ಬಿಜೆಪಿ 18ರಿಂದ 32 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಲಿದೆ ಎಂದು ಅಂದಾಜಿಸಿದ್ದವು. ಅಂದರೆ, ಆಡಳಿತಾರೂಢ ಬಿಜೆಪಿಗೆ ಮುಖಭಂಗವಾಗಲಿವೆ. ಕಾಂಗ್ರೆಸ್ ನಿಚ್ಚಳ ಬಹುಮತ ಸಾಧಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು.