ನವದೆಹಲಿ: ಚುನಾವಣೋತ್ತರ ಸಮೀಕ್ಷೆಗಳು ನಷ್ಟದ ವ್ಯವಹಾರವಾಗಿವೆ ಎಂದು ಆಕ್ಸಿಸ್ ಮೈ ಇಂಡಿಯಾ ಮುಖ್ಯಸ್ಥ ಪ್ರದೀಪ್ ಗುಪ್ತಾ ಹೇಳಿದ್ದಾರೆ. ಸಮೀಕ್ಷೆ ನಡೆಸುವ ಸಂಸ್ಥೆಗೆ ಒಂದಿಷ್ಟು ಪ್ರಚಾರ ಸಿಗುತ್ತದೆ ಎಂಬುದನ್ನು ಬಿಟ್ಟರೆ ಬೇರೆ ಯಾವ ಲಾಭವೂ ಇದರಿಂದ ಸಿಗುವುದಿಲ್ಲ ಎಂದು ಅವರು ಅಚ್ಚರಿಯ ಮಾಹಿತಿ ಬಹಿರಂಗಪಡಿಸಿದ್ದಾರೆ. ಗುಪ್ತಾ ಅವರನ್ನು ಜೂನ್ 4 ರವರೆಗೆ ಚುನಾವಣೋತ್ತರ ಸಮೀಕ್ಷೆಗಳ ಪೋಸ್ಟರ್ ಬಾಯ್ ಎಂದು ಪರಿಗಣಿಸಲಾಗಿತ್ತು. ಆದರೆ ಫಲಿತಾಂಶಗಳು ಪ್ರಕಟವಾಗುತ್ತಿದ್ದಂತೆಯೇ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ಹುಸಿಯಾಗಿದ್ದವು. ಇದು ಸಮೀಕ್ಷೆಗಳ ವಿಶ್ವಾಸಾರ್ಹತೆಗೆ ಭಾರಿ ದೊಡ್ಡ ಹೊಡೆತ ನೀಡಿತು.
ಪಿಟಿಐನ ಪ್ರಧಾನ ಕಚೇರಿಯಲ್ಲಿ ಪಿಟಿಐ ಸಂಪಾದಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಗುಪ್ತಾ, ತಮ್ಮ ಗ್ರಾಹಕರ ಪೈಕಿ ಶೇಕಡಾ 70 ರಷ್ಟು ಕಾರ್ಪೊರೇಟ್ ಗ್ರಾಹಕರಾಗಿದ್ದು, ಅವರೇ ಆದಾಯದ ಮುಖ್ಯ ಮೂಲವಾಗಿದ್ದಾರೆ ಎಂದು ಹೇಳಿದರು.
"ನಾವು ಸಮೀಕ್ಷೆಗಾಗಿ ಮಾಡುವ ಇತರ ಖರ್ಚುಗಳನ್ನು ಹೊರತುಪಡಿಸಿ, ನಿಖರವಾದ ಮಾಹಿತಿ ಪಡೆಯುವುದಕ್ಕಾಗಿ ಸಮೀಕ್ಷೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ 500 ರೂಪಾಯಿ ಪಾವತಿಸುತ್ತೇವೆ. ಕಳೆದ ಬಾರಿಯ ಚುನಾವಣೆಯಲ್ಲಿ ನಾವು 3605 ವಿಧಾನಸಭಾ ಕ್ಷೇತ್ರಗಳಲ್ಲಿ ಸಮೀಕ್ಷೆ ಮಾಡಿದ್ದೇವೆ" ಎಂದು ಗುಪ್ತಾ ತಿಳಿಸಿದರು.
"ನಮ್ಮ ಸಮೀಕ್ಷೆಗಳು ನಿಖರವಾಗಿದ್ದರೂ ಕೂಡ ಅದಕ್ಕಾಗಿ ಖರ್ಚು ಮಾಡಿದ ಹಣವೇನೂ ನಮಗೆ ವಾಪಸ್ ಸಿಗುವುದಿಲ್ಲ. ಆದರೆ ನಮ್ಮ ಕಂಪನಿಯ ಬ್ರಾಂಡ್ ಮೌಲ್ಯ ಹೆಚ್ಚಾಗುತ್ತದೆ. ನಾವು ಹಣಕಾಸಿನ ರೂಪದಲ್ಲಿ ನಷ್ಟ ಅನುಭವಿಸಿದರೂ ಪ್ರಚಾರದ ವಿಷಯದಲ್ಲಿ ಉತ್ತಮ ಲಾಭವನ್ನೇ ಪಡೆಯುತ್ತೇವೆ" ಎಂದು ಅವರು ಮಾಹಿತಿ ನೀಡಿದರು.