ನವದೆಹಲಿ:ದೆಹಲಿ ಅಬಕಾರಿ ನೀತಿ ಹಗರಣ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿ ಬಂಧಿತರಾಗಿರುವ ತೆಲಂಗಾಣ ಮಾಜಿ ಸಿಎಂ ಕೆಸಿಆರ್ ಪುತ್ರಿ, ಬಿಆರ್‌ಎಸ್ ನಾಯಕಿ ಕೆ.ಕವಿತಾ ಅವರನ್ನು ಸಿಬಿಐ ವಿಚಾರಣೆ ನಡೆಸಲು ಅವಕಾಶ ನೀಡಬಾರದು ಎಂದು ಕೋರಿ ಅರ್ಜಿ ಸಲ್ಲಿಸಲಾಗಿದೆ.
ಪ್ರಕರಣದಲ್ಲಿ ನಡೆದ ಭ್ರಷ್ಟಾಚಾರ ಕುರಿತು ತನಿಖೆ ನಡೆಸಲು ಕವಿತಾ ಅವರ ವಿಚಾರಣೆಗೆ ಅವಕಾಶ ಕೋರಿದ್ದ ಕೇಂದ್ರೀಯ ತನಿಖಾ ದಳಕ್ಕೆ(ಸಿಬಿಐ) ಕೋರ್ಟ್ ಅನುಮತಿ ನೀಡಿದೆ. ಇದರ ವಿರುದ್ಧ ಬಿಆರ್‌ಎಸ್ ನಾಯಕಿ ಸ್ಥಳೀಯ ಕೋರ್ಟ್ನಲ್ಲಿ ಸವಾಲು ಮಾಡಿದ್ದಾರೆ. ಕವಿತಾ ಅವರು ಈಗಾಗಲೇ ಇಡಿ ಬಂಧನದಲ್ಲಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ಸಿಬಿಐ ಕೂಡ ಅವರ ವಿರುದ್ಧ ಕೇಸ್ ದಾಖಲಿಸಿಕೊಂಡು ವಿಚಾರಣೆಗೆ ಮುಂದಾಗಿದೆ. ಸಿಬಿಐ ಅಧಿಕಾರಿಗಳು ತಮ್ಮನ್ನು ಪ್ರಶ್ನಿಸದಂತೆ ತಡೆಯಬೇಕು ಎಂದು ಅವರು ಅರ್ಜಿಯಲ್ಲಿ ಕೋರಿದ್ದಾರೆ.
ಕವಿತಾ ಅವರ ಪರ ವಾದ ಮಂಡಿಸಿದ ವಕೀಲ ನಿತೇಶ್ ರಾಣಾ ಅವರು, ಸಿಬಿಐ ತಮ್ಮ ಕಕ್ಷಿದಾರರನ್ನು ವಿಚಾರಣೆ ನಡೆಸುತ್ತಿರುವುದು ಕಾನೂನಿನ ವಿರುದ್ಧವಾಗಿದೆ. ಇಡಿ ವಿಚಾರಣೆಯಲ್ಲಿರುವಾಗಲೇ ಸಿಬಿಐ ವಿಚಾರಣೆ ಸಲ್ಲದು ಎಂದು ಕೋರ್ಟ್ ಮುಂದೆ ವಾದಿಸಿದ್ದಾರೆ. ನ್ಯಾಯಾಲಯಕ್ಕೆ ನಿಜ ಸಂಗತಿಗಳನ್ನು ತಿಳಿಸದೇ, ವಿಚಾರಣೆಗೆ ಅನುಮತಿ ಪಡೆಯಲಾಗಿದೆ. ಇದರಲ್ಲಿ ಕವಿತಾ ಅವರ ವಾದವನ್ನೂ ಆಲಿಸಬೇಕು. ಅಲ್ಲಿಯವರೆಗೂ ಸಿಬಿಐಗೆ ನೀಡಿದ ಅನುಮತಿಯನ್ನು ಹಿಂಪಡೆಯಬೇಕು ಎಂದು ಕೋರಿದ್ದಾರೆ. ಕೋರ್ಟ್ ಕವಿತಾ ಪರ ಅರ್ಜಿಯನ್ನು ಶನಿವಾರದ ನಂತರ ಆಲಿಸುವ ಸಾಧ್ಯತೆಯಿದೆ.