ನವದೆಹಲಿ: ಶುಕ್ರವಾರ ಜಾರಿ ನಿರ್ದೇಶನಾಲಯ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಅಹಮದಾಬಾದ್ ಮತ್ತು ಮುಂಬೈನ 7 ಕಡೆಗಳಲ್ಲಿ ದಾಳಿ ನಡೆಸಿರುವ ಇಡಿ ಅಧಿಕಾರಿಗಳು ಬರೋಬ್ಬರಿ ಹದಿಮೂರುವರೆ ಕೋಟಿ ರೂಪಾಯಿ (13.5 ಕೋಟಿ ರೂ.) ಅಕ್ರಮ ಹಣವನ್ನು ವಶಕ್ಕೆ ಪಡೆದಿದೆ.
ವಶಪಡಿಸಿಕೊಂಡ ಹಣವು ಮಹಾರಾಷ್ಟ್ರದ ಮಾಲೆಗಾಂವ್ನ ನಾಶಿಕ್ ಮರ್ಚೆಂಟ್ ಕೋ-ಆಪರೇಟಿವ್ ಬ್ಯಾಕ್ (NAMCO) ಪ್ರಕರಣಕ್ಕೆ ಸಂಬಂಧಿಸಿದ್ದು ಎಂದು ವರದಿಯಾಗಿದೆ. NAMCO ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ನಿರ್ವಹಿಸಲಾದ ಖಾತೆಗಳ ಮೂಲಕ ಮಾಡಿದ "ಡೆಬಿಟ್ ವಹಿವಾಟುಗಳ" ಹಣದ ಜಾಡಿನ ಬಗ್ಗೆ ಇಡಿ ನಡೆಸಿದ ತನಿಖೆಯಲ್ಲಿ ಹೆಚ್ಚಿನ ಮೊತ್ತವನ್ನು 21 ಅಕೌಂಟ್ಗಳಿಗೆ ವರ್ಗಾಯಿಸಲಾಗಿದೆ ಎಂದು ಗೊತ್ತಾಗಿದೆ. NAMCO ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ನಿರ್ವಹಿಸಲಾದ ಖಾತೆಗಳ ಮೂಲಕ ಮಾಡಿದ "ಡೆಬಿಟ್ ವಹಿವಾಟುಗಳ" ಬಗ್ಗೆ ಇಡಿ ತನಿಖೆ ನಡೆಸಿದಾಗ ಈ ಅಂಶ ಬಯಲಾಗಿದೆ.
ಇಡಿಯ ಮುಂಬೈ ವಲಯದ ತಂಡ ಈ ಶೋಧ ಕಾರ್ಯಾಚರಣೆ ನಡೆಸಿದೆ. "ಈ ಖಾತೆಗಳಲ್ಲಿ ನೂರಾರು ಕೋಟಿ ರೂಪಾಯಿಗಳ ವಹಿವಾಟುಗಳನ್ನು ಹೆಚ್ಚಾಗಿ ಆನ್‌ಲೈನ್ ಬ್ಯಾಂಕಿಂಗ್ ಚಾನಲ್‌ಗಳ ಮೂಲಕ ಜಮಾ ಮಾಡಲಾಗಿದೆ ಮತ್ತು ನಂತರ ವಿವಿಧ ಸಂಸ್ಥೆಗಳು ಮತ್ತು ಕಂಪನಿಗಳಿಗೆ ವರ್ಗಾಯಿಸಿರುವುದು ಬಯಲಾಗಿದೆ" ಎಂದು ಇಡಿ ಹೇಳಿದೆ.
"ಅಲ್ಲದೆ ನೂರಾರು ಕೋಟಿಗಳಷ್ಟು ದೊಡ್ಡ ಮೊತ್ತವನ್ನು ವಿವಿಧ ಡಮ್ಮಿ ಘಟಕಗಳ ಖಾತೆಗಳಿಂದ ನಗದು ರೂಪದಲ್ಲಿ ತೆಗೆಯಲಾಗಿದೆ ಮತ್ತು ಅಹಮದಾಬಾದ್, ಮುಂಬೈ ಮತ್ತು ಸೂರತ್‌ನಲ್ಲಿರುವ ಅಂಗಡಿಗಳು ಮತ್ತು ಹವಾಲಾ ಆಪರೇಟರ್‌ಗಳಿಗೆ ಆ ಹಣವನ್ನು ವಿತರಿಸಲಾಗಿದೆ." ಇದು ನವೆಂಬರ್‌ನಲ್ಲಿ ಈ ಪ್ರಕರಣದಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯ ಮುಂದುವರಿದ ಭಾಗವಾಗಿದೆ ಎಂದು ಜಾರಿ ನಿರ್ದೇಶನಾಲಯ ಮಾಹಿತಿ ನೀಡಿದೆ.