ಶ್ರೀನಗರ (ಜಮ್ಮು ಮತ್ತು ಕಾಶ್ಮೀರ):ದಶಕದ ಬಳಿಕ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು, ನಿರೀಕ್ಷೆ ಗರಿಗೆದರಿದೆ. ಈ ನಡುವೆ ಚುನಾವಣಾ ಆಯೋಗ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ವಿವಿಧ ಕಾರಣಗಳಿಂದ ಕಣಿವೆ ಬಿಟ್ಟು ದೇಶದ ವಿವಿಧೆಡೆ ವಾಸಿಸುತ್ತಿರುವ ಕಾಶ್ಮೀರಿ ವಲಸಿಗರಿಗೆ ಪ್ರತ್ಯೇಕ ಮತಕೇಂದ್ರಗಳನ್ನು ಸ್ಥಾಪಿಸಿದೆ. ಜಮ್ಮು, ಉಧಂಪುರ ಮತ್ತು ದೆಹಲಿಯಲ್ಲಿ ಈ ಕೇಂದ್ರಗಳಿವೆ.
ಮತದಾನ ಮಾಡಲು ಕಾಶ್ಮೀರಿ ವಲಸಿಗರು ಲೋಕಸಭೆ ಚುನಾವಣೆಯಂತೆ ಫಾರ್ಮ್-ಎಂ ಅನ್ನು ಭರ್ತಿ ಮಾಡಬೇಕಿಲ್ಲ. ವಲಸೆ ಬಂದ ಬಗ್ಗೆ ಸೂಕ್ತ ದಾಖಲೆ ನೀಡಿದಲ್ಲಿ ಅಂಥವರು ವಿಶೇಷ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಬಹುದಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಇಂತಹ 24 ಕೇಂದ್ರಗಳನ್ನು ಮೂರು ಕಡೆ ಸ್ಥಾಪಿಸಲಾಗಿದೆ. ಜಮ್ಮುವಿನಲ್ಲಿ 19, ಉಧಂಪುರದಲ್ಲಿ 1, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 4 ಮತಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇವುಗಳು ಕಾಶ್ಮೀರಿ ವಲಸಿಗ ಮತದಾರರು ವಿಧಾನಸಭೆ ಚುನಾವಣೆಯಲ್ಲಿ ಮತದಾನ ಹಕ್ಕಿನಿಂದ ವಂಚಿತರಾಗದಂತೆ ನೋಡಿಕೊಳ್ಳಲಿದೆ ಎಂದು ಕೇಂದ್ರಾಡಳಿತ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ ಪಿ.ಕೆ. ಪೋಲ್ ಹೇಳಿದ್ದಾರೆ.
ಜಮ್ಮು, ಉಧಂಪುರ ಮತ್ತು ದೆಹಲಿಯ ವಿವಿಧ ಪರಿಹಾರ ಕೇಂದ್ರಗಳಲ್ಲಿ ನೆಲೆಸಿರುವ ಕಾಶ್ಮೀರಿ ವಲಸಿಗ ಮತದಾರರು, ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಮೂಲಕ ವೈಯಕ್ತಿಕವಾಗಿ ಮತ ಚಲಾಯಿಸಲು ಆಯ್ಕೆ ಮಾಡಿಕೊಳ್ಳಬಹುದು. ಮತದಾನಕ್ಕಾಗಿ ಫಾರ್ಮ್-ಎಂ ಅನ್ನು ಭರ್ತಿ ಮಾಡುವುದನ್ನು ರದ್ದು ಮಾಡಲಾಗಿದೆ. ಅವರು ವಲಸೆ ಬಂದ ಬಗ್ಗೆ ಸೂಕ್ತ ಮಾಹಿತಿ ನೀಡಿದಲ್ಲಿ ಅವರಿಗೆ ನಿಗದಿತ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಲು ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.