ನವದೆಹಲಿ: ಚುನಾವಣಾ ಬಾಂಡ್ಗಳಿಗೆ ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗವು ಭಾನುವಾರ ಹೊಸ ವಿವರಗಳನ್ನು ಪ್ರಕಟಿಸಿದೆ. ಮುಚ್ಚಿದ ಲಕೋಟೆಯಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಚುನಾವಣಾ ಬಾಂಡ್ ಮಾಹಿತಿ ಇದಾಗಿದೆ. ಇದರ ಪ್ರಕಾರ, ಕೇಂದ್ರದ ಆಡಳಿತಾರೂಢ ಬಿಜೆಪಿ 6,987 ಕೋಟಿ ರೂಪಾಯಿಗಳ ಚುನಾವಣಾ ಬಾಂಡ್‌ಗಳನ್ನು ಎನ್‌ಕ್ಯಾಶ್ ಮಾಡಿದೆ.
ಸುಪ್ರೀಂ ಕೋರ್ಟ್‌ನ ಮಧ್ಯಂತರ ಆದೇಶದ ನಿರ್ದೇಶನದಂತೆ ರಾಜಕೀಯ ಪಕ್ಷಗಳು ಮುಚ್ಚಿದ ಲಕೋಟೆಯಲ್ಲಿ ಚುನಾವಣಾ ಬಾಂಡ್‌ಗಳ ಮಾಹಿತಿಯನ್ನು ಸಲ್ಲಿಸಿವೆ. ರಾಜಕೀಯ ಪಕ್ಷಗಳಿಂದ ಪಡೆದ ಈ ಮಾಹಿತಿಯನ್ನು ತೆರೆಯದೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
''ರಾಜಕೀಯ ಪಕ್ಷಗಳಿಂದ ಸ್ವೀಕರಿಸಿದ ಅಂಕಿ-ಅಂಶಗಳನ್ನು ತೆರೆಯದೆ ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದೆ. 2024ರ ಮಾರ್ಚ್ 15ರಂದ ಸುಪ್ರೀಂ ಕೋರ್ಟ್‌ನ ಆದೇಶದ ಅನುಸಾರವಾಗಿ, ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ಪೆನ್ ಡ್ರೈವ್‌ನಲ್ಲಿ ಡಿಜಿಟೈಸ್ ಮಾಡಿದ ದಾಖಲೆಯೊಂದಿಗೆ ಮುಚ್ಚಿದ ಲಕೋಟೆಯಲ್ಲಿ ಭೌತಿಕ ಪ್ರತಿಗಳನ್ನು ಹಿಂದಿರುಗಿಸಿದ್ದಾರೆ. ಭಾರತೀಯ ಚುನಾವಣಾ ಆಯೋಗವು ಇಂದು ತನ್ನ ವೆಬ್‌ಸೈಟ್‌ನಲ್ಲಿ ಚುನಾವಣಾ ಬಾಂಡ್‌ಗಳ ಕುರಿತು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ನಿಂದ ಡಿಜಿಟೈಸ್ ಮಾಡಿದ ಫಾರ್ಮ್‌ನಲ್ಲಿ ಸ್ವೀಕರಿಸಿದ ಮಾಹಿತಿಯನ್ನು ಅಪ್‌ಲೋಡ್ ಮಾಡಿದೆ'' ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಯಾವ ಪಕ್ಷಕ್ಕೆ ಎಷ್ಟು ಕೋಟಿ?:ಚುನಾವಣಾ ಆಯೋಗದ ಹೊಸ ವಿವರಗಳ ಪ್ರಕಾರ, ಬಿಜೆಪಿ ಒಟ್ಟು 6,987.40 ಕೋಟಿ ರೂಪಾಯಿಗಳ ಚುನಾವಣಾ ಬಾಂಡ್‌ಗಳನ್ನು ಎನ್‌ಕ್ಯಾಶ್ ಮಾಡಿದೆ. 2019-20ರಲ್ಲಿ ಅತ್ಯಧಿಕ 2,555 ಕೋಟಿ ರೂ.ಗಳನ್ನು ಪಡೆದುಕೊಂಡಿದೆ. ಅಲ್ಲದೇ, ಎಲ್ಲ ರಾಜಕೀಯ ಪಕ್ಷಗಳಲ್ಲೂ ಚುನಾವಣಾ ಬಾಂಡ್ ಮೂಲಕ ಬಿಜೆಪಿ ಅತಿ ಹೆಚ್ಚಿನ ದೇಣಿಗೆ ಪಡೆದುಕೊಂಡಿದೆ.
ಬಿಜೆಪಿ ನಂತರ ತೃಣಮೂಲ ಕಾಂಗ್ರೆಸ್ ಇದ್ದು, ಚುನಾವಣಾ ಬಾಂಡ್‌ಗಳ ಮೂಲಕ 1,397 ಕೋಟಿ ರೂಪಾಯಿಗಳನ್ನು ಟಿಎಂಸಿ ಸ್ವೀಕರಿಸಿದೆ. ಇದಾದ ನಂತರ ಮೂರನೇ ಸ್ಥಾನದಲ್ಲಿ ಕಾಂಗ್ರೆಸ್ ಇದ್ದು, ಈ ಪಕ್ಷವು ಚುನಾವಣಾ ಬಾಂಡ್‌ಗಳ ಮೂಲಕ ಒಟ್ಟು 1,334.35 ಕೋಟಿ ರೂ. ಪಡೆದುಕೊಂಡಿದೆ. ಇದರ ನಂತರ ನಾಲ್ಕನೇ ಸ್ಥಾನದಲ್ಲಿ ಬಿಆರ್ಎಸ್ 1,322 ಕೋಟಿ ಮೌಲ್ಯದ ಬಾಂಡ್‌ಗಳನ್ನು ಎನ್‌ಕ್ಯಾಶ್ ಮಾಡಿದೆ ಎಂದು ಚುನಾವಣಾ ಆಯೋಗದ ಅಂಕಿ-ಅಂಶಗಳು ತಿಳಿಸಿವೆ.