ನವದೆಹಲಿ:ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿನ ಬಾಂಬ್ ಸ್ಫೋಟ ಪ್ರಕರಣಕ್ಕೆ ತಮಿಳುನಾಡು ನಂಟಿನ ಆರೋಪ ಮಾಡಿರುವ ಕೇಂದ್ರ ಸಚಿವೆ, ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಅವರಿಗೆ ಸಂಕಷ್ಟ ಎದುರಾಗಿದೆ. ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗಿರುವ ಶೋಭಾ ವಿರುದ್ಧ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದ ದೂರು ದಾಖಲಿಸಿದೆ. ಈ ದೂರಿನ ಕುರಿತು ತಕ್ಷಣವೇ ಮತ್ತು ಸೂಕ್ತ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗವು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗೆ (ಸಿಇಒ) ಬುಧವಾರ ಸೂಚಿಸಿದೆ.
ಮಾರ್ಚ್ 1ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಐಇಡಿ ಸ್ಫೋಟಕ್ಕೆ ತಮಿಳುನಾಡಿನ ವ್ಯಕ್ತಿಯೊಬ್ಬರು ಕಾರಣ ಎಂದು ಶೋಭಾ ಕರಂದ್ಲಾಜೆ ಮಾರ್ಚ್ 19ರಂದು ಆರೋಪಿಸಿದ್ದರು. ಈ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ. ಅಲ್ಲದೇ, ಈ ಸಂಬಂಧ ಶೋಭಾ ಕರಂದ್ಲಾಜೆ ವಿರುದ್ಧ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಚುನಾವಣೆ ಆಯೋಗಕ್ಕೆ ದೂರು ನೀಡಿ, ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಇದೀಗ ಚುನಾವಣಾ ಆಯೋಗವು ಈ ವಿಷಯದ ಬಗ್ಗೆ 48 ಗಂಟೆಗಳ ಕ್ರಮ ಜರುಗಿಸಿ ವರದಿಯನ್ನು ಸಲ್ಲಿಸುವಂತೆ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗೆ ಆದೇಶಿಸಿದೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪ್ರಮುಖ ರಾಜಕೀಯ ವ್ಯಕ್ತಿಯ ವಿರುದ್ಧ ಚುನಾವಣಾ ಆಯೋಗದ ಕ್ರಮಕ್ಕೆ ಆದೇಶಿಸಿದ ಮೊದಲ ಪ್ರಕರಣ ಇದಾಗಿದೆ.
ಇದನ್ನೂ ಓದಿ:ಕೆಫೆ ಸ್ಫೋಟ ಪ್ರಕರಣ: ತಮಿಳರ ಬಗ್ಗೆ ವಿವಾದಾತ್ಮಕ ಹೇಳಿಕೆಗೆ ಶೋಭಾ ಕರಂದ್ಲಾಜೆ ಕ್ಷಮೆಯಾಚನೆ
ಮಂಗಳವಾರ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ್ದ ಸಚಿವೆ ಶೋಭಾ ಕರಂದ್ಲಾಜೆ, ''ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ತಮಿಳುನಾಡಿನಿಂದ ಬಂದವರು ಇಲ್ಲಿ ಬಾಂಬ್ ಇಡುತ್ತಾರೆ. ದೆಹಲಿಯಿಂದ ಬಂದವರು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಾರೆ. ಕೇರಳದಿಂದ ಬಂದವರು ಆ್ಯಸಿಡ್ ದಾಳಿಗಳು ನಡೆಸುತ್ತಾರೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ತಮ್ಮ ಹೇಳಿಕೆಗಳಿಗೆ ಶೋಭಾ ಕ್ಷಮೆಯಾಚಿಸಿ, ಈ ಹೇಳಿಕೆಗಳನ್ನು ಹಿಂತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದರು.
ಆದರೆ, ಶೋಭಾ ಕರಂದ್ಲಾಜೆ ಈ ಹೇಳಿಕೆಯು ತಮಿಳುನಾಡಿನ ಜನರನ್ನು ಉಗ್ರವಾದಿಗಳು ಎಂದು ಸಾಮಾನ್ಯೀಕರಿಸಿದೆ ಎಂದು ಡಿಎಂಕೆ ಆರೋಪಿಸಿದೆ. ಅಲ್ಲದೇ, ತಮಿಳುನಾಡು ಸಿಎಂ ಸ್ಟಾಲಿನ್ ಸೇರಿ ಅನೇಕ ರಾಜಕೀಯ ನಾಯಕರು ಸಹ ಈ ಹೇಳಿಕೆಯನ್ನು ಖಂಡಿಸಿದ್ದಾರೆ. ಮತ್ತೊಂದೆಡೆ, ಶೋಭಾ ಕರಂದ್ಲಾಜೆ ವಿರುದ್ಧ ಮಧುರೈ ಜಿಲ್ಲೆಯ ಕಟಾಚನೇಂಡಾಲ್‌ನ ತ್ಯಾಗರಾಜನ್ ಎಂಬುವರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಸಚಿವೆ ಶೋಭಾ ಅವರ ಈ ಹೇಳಿಕೆಯು ಕರ್ನಾಟಕ ಮತ್ತು ತಮಿಳುನಾಡಿನ ಜನರ ನಡುವೆ ದ್ವೇಷದ ಭಾವನೆಗಳನ್ನು ಮೂಡಿಸಲು ಪ್ರಯತ್ನಿಸುತ್ತಿದೆ. ತಮಿಳರು ಮತ್ತು ಕನ್ನಡ ಮಾತನಾಡುವ ಜನರ ನಡುವೆ ದ್ವೇಷವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಸೈಬರ್ ಕ್ರೈಂ ಪೊಲೀಸರು ಶೋಭಾ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಇದನ್ನೂ ಓದಿ:ತಮಿಳುನಾಡಿನ ಬಗ್ಗೆ ಹೇಳಿಕೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಎಫ್‌ಐಆರ್ ದಾಖಲು