ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಬುಧವಾರ ಪೂರ್ವ ಮತ್ತು ದಕ್ಷಿಣ ಆಫ್ರಿಕಾದ ದೇಶಗಳ ಪತ್ರಕರ್ತರನ್ನು ಭೇಟಿಯಾದರು. ಭಾರತದಲ್ಲಿ ನಡೆಯುತ್ತಿರುವ ಪರಿವರ್ತನೆ, ಜಾಗತಿಕ ದಕ್ಷಿಣಕ್ಕೆ ಭಾರತದ ಬದ್ಧತೆ ಮತ್ತು ಭಾರತದ ಅಭಿವೃದ್ಧಿ ಕುರಿತು ಆಫ್ರಿಕಾದ ಪತ್ರಕರ್ತರು, ವಿದೇಶಾಂಗ ಸಚಿವ ಜೈ ಶಂಕರ್ ಜತೆ ಮಾತನಾಡಿದರು.
ಈ ಬಗ್ಗೆ ತಮ್ಮ ಎಕ್ಸ್ ಹ್ಯಾಂಡಲ್ ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಅವರು, "ಇಂದು ದೆಹಲಿಯಲ್ಲಿ ಪೂರ್ವ ಮತ್ತು ದಕ್ಷಿಣ ಆಫ್ರಿಕಾದ ದೇಶಗಳ 15 ಪತ್ರಕರ್ತರನ್ನು ಭೇಟಿಯಾಗಲು ಸಂತೋಷವಾಯಿತು. ಭಾರತದಲ್ಲಿ ನಡೆಯುತ್ತಿರುವ ಪರಿವರ್ತನೆ, ಗ್ಲೋಬಲ್ ಸೌತ್‌ಗೆ ಭಾರತದ ಬದ್ಧತೆ ಮತ್ತು ಭಾರತ-ಆಫ್ರಿಕಾ ಸಂಬಂಧಗಳನ್ನು ವಿಸ್ತರಿಸುವುದು, ಭಾರತದ ವಿದೇಶಾಂಗ ನೀತಿ ಆಯ್ಕೆಗಳು, ಆಫ್ರಿಕಾದೊಂದಿಗಿನ ವ್ಯಾಪಾರ ಸಂಬಂಧಗಳು ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಗಳ ಬಗ್ಗೆ ಸಮಾಲೋಚನೆ ನಡೆಸಿದೆವು’’ ಎಂದು ಅವರು ತಿಳಿಸಿದ್ದಾರೆ.
ಆಫ್ರಿಕಾದೊಂದಿಗಿನ ಬಾಂಧವ್ಯ ಬಲಪಡಿಸುವ ಪ್ರಯತ್ನದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ತಿಂಗಳು ನೈಜೀರಿಯಾಕ್ಕೆ ಭೇಟಿ ನೀಡಿದ್ದರು. 17 ವರ್ಷಗಳ ನಂತರ ಭಾರತೀಯ ಪ್ರಧಾನಿಯೊಬ್ಬರು ಆ ದೇಶಕ್ಕೆ ನೀಡಿದ ಮೊದಲ ಭೇಟಿಯಾಗಿದೆ. ಈ ಪ್ರವಾಸದ ಸಮಯದಲ್ಲಿ ಪ್ರಧಾನಿ ಮೋದಿ ನೈಜೀರಿಯಾದ ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು ಅವರೊಂದಿಗೆ ಫಲಪ್ರದ ಚರ್ಚೆ ನಡೆಸಿದ್ದರು. ರಕ್ಷಣೆ, ತಂತ್ರಜ್ಞಾನ, ಆರೋಗ್ಯ ಮತ್ತು ಶಿಕ್ಷಣದಂತಹ ಕ್ಷೇತ್ರಗಳಲ್ಲಿ ತಮ್ಮ ಪಾಲುದಾರಿಕೆಯನ್ನು ಬಲಪಡಿಸುವುದರ ಬಗ್ಗೆ ಚರ್ಚಿಸಿದ್ದರು.