ನವದೆಹಲಿ:ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು ಬಿಜೆಪಿ ಪಕ್ಷ ಮ್ಯಾಜಿಕ್ ನಂಬರ್ ದಾಟಿ ಗೆಲುವಿನತ್ತ ಸಾಗುತ್ತಿದೆ. ಬಿಜೆಪಿ ಅಂತಿಮವಾಗಿ ಗೆಲುವು ಸಾಧಿಸಿಯೇ ಬಿಟ್ಟರೆ ಬರೋಬ್ಬರಿ 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯ ಸಿಎಂ ಪಟ್ಟ ತನ್ನದಾಗಿಸಿಕೊಳ್ಳಲಿದೆ. ಅಧಿಕಾರದ ಗದ್ದುಗೆ ಏರಲಿದೆ. ಕೊನೆಯದ್ದಾಗಿ ಬಿಜೆಪಿ ದೆಹಲಿಯಲ್ಲಿ ಸರ್ಕಾರ ನಡೆಸಿದ್ದು 1998ರಲ್ಲಿ.
ಅದು 1998 ರ ಕಾಲ. ವಾಜಪೇಯಿ ಆಗ ದೇಶದ ಪ್ರಧಾನಿ ಆಗಿದ್ದರು. ಆಗ ದೇಶದಲ್ಲಿ ಈರುಳ್ಳಿ ಬೆಲೆ ಗಗನಕ್ಕೆ ಏರಿತ್ತು. ದೆಹಲಿ ರಾಜ್ಯ ಸರ್ಕಾರದ ವಿರುದ್ಧ ಭುಗಿಲೆದ್ದ ಆಕ್ರೋಶ ತಣಿಸಲು ಕೇಂದ್ರ ಮಂತ್ರಿಯಾಗಿದ್ದ, ಆಗಿನ ಮಿಂಚಿನ ಬಳ್ಳಿ ಸುಷ್ಮಾ ಸ್ವರಾಜ್ ಅವರನ್ನು ಬಿಜೆಪಿ ದೆಹಲಿ ಮುಖ್ಯಮಂತ್ರಿಯನ್ನಾಗಿ ಮಾಡಿತ್ತು.
ಈ ಮೂಲಕ 1998 ರಲ್ಲಿ ಸುಷ್ಮಾ ಸ್ವರಾಜ್ ದೆಹಲಿಯ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಇತಿಹಾಸ ಸೃಷ್ಟಿಸಿದ್ದರು. ದುರದೃಷ್ಟವಶಾತ್ ಅವರು ನಡೆಸಿದ ಅಧಿಕಾರವಧಿ ಕೇವಲ 52 ದಿನಗಳು. ನಂತರ ಅವರು ಚುನಾವಣೆಯಲ್ಲಿ ಸೋತು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು.
ತಲೆಬಿಸಿ ಮಾಡಿ, ಅಧಿಕಾರ ಕಸಿದುಕೊಂಡಿದ್ದ ತರಕಾರಿ:ತರಕಾರಿ ಬೆಲೆ ಏರಿಕೆ ರಾಜ್ಯದ ಸರ್ಕಾರವನ್ನು ಅಧಿಕಾರದಿಂದ ಕೆಳಗೆ ಇಳಿಯುವಂತೆ ಮಾಡಿತ್ತು. 1998 ರಲ್ಲಿ ಏರುತ್ತಿದ್ದ ಈರುಳ್ಳಿ ಬೆಲೆಯು ದೆಹಲಿಯ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿದ್ದ ಸುಷ್ಮಾ ಸ್ವರಾಜ್ ಅವರ ಸರ್ಕಾರವನ್ನು ಉರುಳಿಸಿತ್ತು.
ಸಿಎಂ ಸುಷ್ಮಾ ಸ್ವರಾಜ್ ಉಳ್ಳಾಗಡ್ಡಿ ಬೆಲೆಯನ್ನು ಬೆಲೆಯನ್ನು ಕಡಿಮೆ ಮಾಡುವುದಕ್ಕೆ ಸಕಲ ರೀತಿಯಲ್ಲಿಯೂ ಪ್ರಯತ್ನ ಪಟ್ಟಿದ್ದರು. ಅದರಂತೆ ಸಾರ್ವಜನಿಕರಿಗೆ ಕೆಜಿಗೆ 5 ರೂಪಾಯಿಯಂತೆ ಈರುಳ್ಳಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೂ ದಿಲ್ಲಿ ಜನ ಇವರ ಭರವಸೆಯನ್ನು ನಂಬಿರಲಿಲ್ಲ. ಬದಲಾಗಿ ಆಗ ಶೀಲಾ ದೀಕ್ಷಿತ್ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿದ್ದರು.