ಚೆನ್ನೈ (ತಮಿಳುನಾಡು) :ಲೋಕಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ I.N.D.I.A ಕೂಟದ ಭಾಗವಾಗಿರುವ ಡಿಎಂಕೆ 21 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿತು. ಜೊತೆಗೆ ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ, ಮಹಿಳೆಯರಿಗೆ ಮಾಸಿಕ 1 ಸಾವಿರ ರೂಪಾಯಿ, 356ನೇ ವಿಧಿ ರದ್ದು, ಮಹಿಳೆಯರಿಗೆ 33 ಪ್ರತಿಶತ ಮೀಸಲಾತಿ ತಕ್ಷಣದಿಂದಲೇ ಜಾರಿ ಮಾಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಘೋಷಿಸಿದೆ.
ಹಾಲಿ ಸಂಸದರಾದ ಕನಿಮೋಳಿ, ಟಿ.ಆರ್. ಬಾಲು ಮತ್ತು ಎ. ರಾಜಾ, ದಯಾನಿಧಿ ಮಾರನ್, ಎಸ್ ಜಗತ್ರಕ್ಷಕನ್, ಕಲಾನಿಧಿ ವೀರಸಾಮಿ, ಕತಿರ್ ಆನಂದ್ ಮತ್ತು ಸಿ ಎನ್ ಅಣ್ಣಾದೊರೈ ಅವರನ್ನು ಉಳಿಸಿಕೊಳ್ಳಲಾಗಿದೆ. 39 ಸ್ಥಾನಗಳಲ್ಲಿ 21 ರಲ್ಲಿ ಸ್ಪರ್ಧಿಸಿ ಉಳಿದ 18 ಸ್ಥಾನಗಳನ್ನು ಮಿತ್ರಪಕ್ಷಗಳಾದ ಕಾಂಗ್ರೆಸ್, ಎಡ ಪಕ್ಷಗಳು ಮತ್ತು ವಿಸಿಕೆಗೆ ಹಂಚಿಕೆ ಮಾಡಿದೆ.
ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸ್ಟಾಲಿನ್ ಅವರು ಚುನಾವಣಾ ಪ್ರಣಾಳಿಕೆ ಮತ್ತು ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು. 11 ಹೊಸ ಮುಖಗಳಿಗೆ ಮಣೆ ಹಾಕಲಾಗಿದ್ದರೆ, ಮೂವರು ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ.
ಪ್ರಣಾಳಿಕೆಯಲ್ಲಿ ಏನೇನಿದೆ?:ದೇಶದ ಪ್ರತಿ ರಾಜ್ಯದಲ್ಲಿಯೂ ಎಲ್ಲ ಮಹಿಳೆಯರಿಗೆ ಮಾಸಿಕ 1,000 ರೂಪಾಯಿ, ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33 ಪ್ರತಿಶತ ಮೀಸಲಾತಿ ತಕ್ಷಣಕ್ಕೆ ಅನುಷ್ಠಾನ ಮಾಡುವ ಭರವಸೆಯನ್ನು ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಡಿಎಂಕೆ ನೀಡಿದೆ. ರಾಜ್ಯಪಾಲರ ನೇಮಕ, ರಾಜ್ಯ ಸರ್ಕಾರವನ್ನು ವಜಾಗೊಳಿಸುವ 356 ನೇ ವಿಧಿ ರದ್ದತಿ, ಪುದುಚೇರಿಗೆ ರಾಜ್ಯ ಸ್ಥಾನಮಾನ ನೀಡಲು ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದೆ.
- ದೇಶದ ಮಹಿಳಾ ಸ್ವಸಹಾಯ ಗುಂಪುಗಳಿಗೆ 10 ಲಕ್ಷದವರೆಗೆ ಬಡ್ಡಿ ರಹಿತ ಸಾಲ
- 1 ಲಕ್ಷದವರೆಗೆ ಬಡ್ಡಿರಹಿತ ವಾಹನ ಸಾಲ
- ಮಹಿಳೆಯರಿಗೆ ಮುಟ್ಟಿನ ರಜೆ ನೀಡುವ ಕಾನೂನು ಜಾರಿ
- ಸಣ್ಣ ಉದ್ಯಮಗಳಲ್ಲಿ ಮಹಿಳೆಯರಿಗೆ ಶೇಕಡಾ 30 ರಿಂದ 35 ಪ್ರತಿಶತಕ್ಕೆ ಸಬ್ಸಿಡಿ ಹೆಚ್ಚಳ
- ಮಹಿಳಾ ರೈತರಿಗೆ ಟ್ರ್ಯಾಕ್ಟರ್‌ಗಳು ಮತ್ತು ಇತರ ಕೃಷಿ ಯಂತ್ರೋಪಕರಣಗಳು
- ಮಣ್ಣಿನ ಆರೋಗ್ಯ, ಬೀಜ ಉತ್ಪಾದನೆ ಮತ್ತು ಬೀಜ ತಂತ್ರಜ್ಞಾನದ ಕುರಿತು ರಾಷ್ಟ್ರೀಯ ಮಟ್ಟದ ತರಬೇತಿ
- ಜಿಲ್ಲಾ ಮಟ್ಟದಲ್ಲಿ ಮಹಿಳೆಯರೇ ನಿರ್ವಹಿಸುವ ಮಾರುಕಟ್ಟೆ ನಿರ್ಮಾಣ, ಅದಕ್ಕೆ ಗುರುತಿನ ಚೀಟಿ ವಿತರಣೆ
- 500 ರೂಪಾಯಿಗೆ ಎಲ್ಪಿಜಿ ಸಿಲಿಂಡರ್
- ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 75 ಮತ್ತು 65 ರೂಪಾಯಿಗೆ ಇಳಿಕೆ
- ಮದುವೆ, ಲೈಂಗಿಕ ಶೋಷಣೆ, ಮಕ್ಕಳ ಕಳ್ಳಸಾಗಣೆ ತಡೆಗಟ್ಟಲು ಪ್ರತ್ಯೇಕ ಕಾನೂನು ಜಾರಿ
ಇದನ್ನೂ ಓದಿ:'ರಾಜಕೀಯ ಸ್ಟಾರ್ಟ್ಅಪ್ನಲ್ಲಿ ಪ್ರತಿ ಬಾರಿ ಫೇಲ್': ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ