ನವದೆಹಲಿ: ದಿಲ್ಲಿ ವಕ್ಫ್ ಮಂಡಳಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ಅಮಾನತುಲ್ಲಾ ಖಾನ್ ಅವರ ನ್ಯಾಯಾಂಗ ಬಂಧನವನ್ನು ಇಲ್ಲಿನ ನ್ಯಾಯಾಲಯವು ಅಕ್ಟೋಬರ್ 7ರವರೆಗೆ ವಿಸ್ತರಿಸಿತು. ಶಾಸಕ ಖಾನ್ ತನ್ನ ವೈದ್ಯಕೀಯ ದಾಖಲೆಗಳನ್ನು ಜೈಲಿಗೆ ತೆಗೆದುಕೊಂಡು ಹೋಗಲು ರೂಸ್ ಅವೆನ್ಯೂ ನ್ಯಾಯಾಲಯ ಇದೇ ಸಂದರ್ಭದಲ್ಲಿ ಅನುಮತಿ ನೀಡಿದೆ.
ಇದಲ್ಲದೆ, ತಿಹಾರ್ ಜೈಲಿನಲ್ಲಿ ತನಗೆ ಎಲೆಕ್ಟ್ರಿಕ್ ಕೆಟಲ್ ಮತ್ತು ಗ್ಲೂಕೋಸ್ ಮಾನಿಟರಿಂಗ್ ಸಾಧನ ನೀಡಬೇಕೆಂದು ಕೋರಿ ಅಮಾನತುಲ್ಲಾ ಖಾನ್ ಸಲ್ಲಿಸಿದ ಅರ್ಜಿಯ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಜೈಲು ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ. ಈ ಅರ್ಜಿಯ ಮುಂದಿನ ವಿಚಾರಣೆ ಸೆಪ್ಟೆಂಬರ್ 25ರಂದು ನಡೆಯಲಿದೆ.
ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಅಮಾನತುಲ್ಲಾ ಖಾನ್ ಸಲ್ಲಿಸಿದ್ದ ಅರ್ಜಿಯ ಮೇರೆಗೆ ದೆಹಲಿ ಹೈಕೋರ್ಟ್ ಕಳೆದ ವಾರ ಇಡಿಗೆ ನೋಟಿಸ್ ನೀಡಿತ್ತು. ಈ ಪ್ರಕರಣದಲ್ಲಿ ಅಕ್ಟೋಬರ್ 18ರಂದು ವಿಚಾರಣೆಯನ್ನು ನಿಗದಿಪಡಿಸಿರುವ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರ ನ್ಯಾಯಪೀಠವು, ಖಾನ್ ಅವರ ಅರ್ಜಿಗೆ ಎರಡು ವಾರಗಳಲ್ಲಿ ಉತ್ತರ ಸಲ್ಲಿಸುವಂತೆ ಜಾರಿ ನಿರ್ದೇಶನಾಯಕ್ಕೆ ಸೂಚಿಸಿದೆ.
ಹಗರಣದ ಪ್ರಮುಖ ಆರೋಪಿ ಅಮಾನತುಲ್ಲಾ ಖಾನ್ ಅವರನ್ನು ಸೆಪ್ಟಂಬರ್ 2ರಂದು ಅವರ ನಿವಾಸದ ಮೇಲೆ ದಾಳಿ ನಡೆಸಿದ ನಂತರ ಇಡಿ ಬಂಧಿಸಿತ್ತು. ಅವರ ಏಳು ದಿನಗಳ ಇಡಿ ಕಸ್ಟಡಿ ಸೆಪ್ಟೆಂಬರ್ 9ರಂದು ಕೊನೆಗೊಂಡಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾನ್ ಅವರನ್ನು ಈ ಹಿಂದೆ ಏಪ್ರಿಲ್ನಲ್ಲಿ ಕೂಡ ಇಡಿ ಬಂಧಿಸಿತ್ತು. ಆದರೆ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯ ಈ ಪ್ರಕರಣದಲ್ಲಿ ಅವರಿಗೆ ಜಾಮೀನು ನೀಡಿತ್ತು.