ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿ, 27 ವರ್ಷಗಳ ಬಳಿಕ ಗದ್ದುಗೆ ಏರುತ್ತಿದೆ. ಇತ್ತ ಆಡಳಿತಾರೂಢ ಆಪ್ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ. ಆದರೆ ಆಪ್ನ ಅಭ್ಯರ್ಥಿಯೊಬ್ಬರು ಅತೀ ಹೆಚ್ಚು ಅಂತರದ ಮತಗಳ ಮೂಲಕ ಜಯಭೇರಿ ಬಾರಿಸಿದರೆ, ಬಿಜೆಪಿಯ ಅಭ್ಯರ್ಥಿಯೊಬ್ಬರು ಕೇವಲ 344 ಮತಗಳಿಂದ ಗೆದ್ದಿದ್ದಾರೆ.
ದೆಹಲಿ ವಿಧಾನಸಭೆಯ 70 ಕ್ಷೇತ್ರಗಳಲ್ಲಿ 6 ಕಡೆ ಕೇವಲ 2000 ಮತಗಳಿಗಿಂತ ಕಡಿಮೆ ಅಂತರದಲ್ಲಿ ಅಭ್ಯರ್ಥಿಗಳು ಜಯಿಸಿದ್ದಾರೆ. ಇಷ್ಟು ಕಡಿಮೆ ಅಂತರದಲ್ಲಿ ಗೆದ್ದ ಆರೂ ಅಭ್ಯರ್ಥಿಗಳು ಬಿಜೆಪಿಯವರು ಎಂಬುದು ಗಮನಾರ್ಹ.
ಅತೀ ಹೆಚ್ಚು ಅಂತರದಿಂದ ಗೆದ್ದವರು :ಮಟಿಯಾಮಹಲ್ ಕ್ಷೇತ್ರದ ಆಪ್ ಅಭ್ಯರ್ಥಿ ಆಲೇನ್ ಮೊಹಮ್ಮದ್ ಇಕ್ಬಾಲ್ ಅವರು ಅತೀ ಹೆಚ್ಚು ಅಂದರೆ 42,724 ಮತಗಳ ಅಂತರದಿಂದ ಜಯಿಸಿದ್ದಾರೆ. ಹಾಗೆಯೇ ಸೀಲಂಪುರ್ ಕ್ಷೇತ್ರದ ಆಪ್ ಅಭ್ಯರ್ಥಿ ಚೌಧರಿ ಜುಬೇರ್ ಅಹಮದ್ ಎರಡನೇ ಅತೀ ಹೆಚ್ಚು ಮತ ಅಂದರೆ 42,477 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ. ರೋಹಿಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಜೇಂದ್ರ ಗುಪ್ತಾ ಮೂರನೇ ಅತೀ ಹೆಚ್ಚು 37,816 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
ದೆವಲಿ ಕ್ಷೇತ್ರದ ಆಪ್ನ ಪ್ರೇಮ್ ಚೌಹಾಣ್ 36,680 ಮತ, ಭವಾನಾ ಕ್ಷೇತ್ರದ ಬಿಜೆಪಿಯ ರವೀಂದ್ರ ಇಂದ್ರಜ್ ಸಿಂಗ್ 31,475 ಮತ ಮತ್ತು ಬಲ್ಲಿಮರನ್ ಕ್ಷೇತ್ರದ ಆಪ್ನ ಇಮ್ರಾನ್ ಹುಸೇನ್ 29,823 ಮತ ಹಾಗೂ ಉತ್ತಮ ನಗರ ಕ್ಷೇತ್ರದ ಬಿಜೆಪಿಯ ಪವನ್ ಶರ್ಮಾ 29,740 ಮತಗಳ ಅಂತರದಿಂದ ಜಯಭೇರಿ ಬಾರಿಸಿದವರು.