ನವದೆಹಲಿ:ಇಬ್ಬರು ಮಕ್ಕಳನ್ನು ಅಪಹರಿಸಿದ ಅಪಹರಣಕಾರ ಸಿನಿಮೀಯ ರೀತಿಯಲ್ಲಿ ಮೂರು ಗಂಟೆಗಳ ಕಾಲ ಕಾರನ್ನು ಚೇಸ್ ಮಾಡಿ, ಆರೋಪಿಯನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಶುಕ್ರವಾರ ರಾತ್ರಿ 11.30ರ ಸುಮಾರಿಗೆ ಶಕರ್ಪುರ್ ಪ್ರದೇಶದಲ್ಲಿನ ವಿಕಾಸ್ ಮಾರ್ಗ್ನಲ್ಲಿ ಹೀರಾ ಸ್ಪೀಟ್ ಶಾಪ್ಗೆ ತಾಯಿ ತನ್ನ 3 ವರ್ಷದ ಮಗ ಮತ್ತು 11 ವರ್ಷದ ಮಗಳೊಂದಿಗೆ ಸಿಹಿತಿಂಡಿ ಖರೀದಿಗೆ ಹೋಗಿದ್ದರು. ಈ ವೇಳೆ ಪಾರ್ಕಿಂಗ್ ಕೆಲಸಗಾರನ ಸೋಗಿನಲ್ಲಿ ಬಂದ ದುಷ್ಕರ್ಮಿ ಇಬ್ಬರು ಮಕ್ಕಳನ್ನು ಕಾರಿನ ಸಮೇತ ಅಪಹರಿಸಿದ್ದ. ಅಲ್ಲದೇ, ತಕ್ಷಣಕ್ಕೆ ಕಾರು ಪ್ರಯಾಣಿಸುವಾಗಲೇ ಮಕ್ಕಳ ಬಿಡುಗಡೆಗೆ 50 ಲಕ್ಷ ರೂ. ಬೇಡಿಕೆ ಇರಿಸಿದ್ದ. ಪ್ರಕರಣ ಸಂಬಂಧ ಮಕ್ಕಳ ತಂದೆ, ತಾಯಿ ಪೊಲೀಸರಿಗೆ ತಕ್ಷಣಕ್ಕೆ ದೂರು ನೀಡಿದ್ದರು.
ದೂರು ಪಡೆದ ಪೊಲೀಸರು ಆರೋಪಿ ಪತ್ತೆಗಾಗಿ ತಕ್ಷಣ ಕಾರ್ಯ ಪ್ರವೃತ್ತರಾಗಿದ್ದು, ಮಕ್ಕಳ ರಕ್ಷಣೆಗೆ ವಿಶೇಷ ತಂಡವನ್ನು ರಚಿಸಿದರು. ಆ ಮಕ್ಕಳ ತಾಯಿ ನೀಡಿದ ದೂರಿನ ಆಧಾರದ ಮೇಲೆ ಶಕರ್ಪುರ್ ಪೊಲೀಸ್ ಠಾಣೆಯ ಎಸ್ಹೆಚ್ಒ ನೇತೃತ್ವದ ಒಂದು ತಂಡ ಮತ್ತು ತಂದೆ ದೂರಿನ ಅನುಸಾರ ಲಕ್ಷ್ಮೀ ನಗರ್ ಎಸ್ಹೆಚ್ಒ ಪೊಲೀಸ್ ತಂಡ ಕಾರ್ಯ ನಿರ್ವಹಿಸಿದೆ. ಜೊತೆಗೆ ತಂತ್ರಜ್ಞಾನದ ಸಹಾಯದಿಂದ ಆರೋಪಿಗಳನ್ನು ಎರಡು ಪ್ರತ್ಯೇಕ ದಿಕ್ಕಿನಲ್ಲಿ ಶೋಧಿಸಲು ಮುಂದಾಯಿತು. ಈ ಸಂಬಂಧ ವಿಶೇಷ ಸಿಬ್ಬಂದಿ ತಂಡ ಮತ್ತು ಇತರೆ ನೆರೆಹೊರೆಯ ಜಿಲ್ಲೆಗಳನ್ನು ಮಕ್ಕಳ ಪತ್ತೆಗೆ ಆಲರ್ಟ್ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.