ನವದೆಹಲಿ:ಹೊಸ ವರ್ಷ ಸ್ವಾಗತಿಸಲು ರಾಷ್ಟ್ರ ರಾಜಧಾನಿ ಸನ್ನದ್ಧವಾಗಿದೆ. ಈ ನಡುವೆ ನಗರದ ನಾಗರಿಕರ ಸುರಕ್ಷತೆ, ಸುಗಮ ಆಚರಣೆ ಮತ್ತು ಪರಿಣಾಮಕಾರಿ ಜನಸಂದಣಿ ನಿರ್ವಹಣೆಗಾಗಿ ದೆಹಲಿ ಪೊಲೀಸರು ನಗರದಾದ್ಯಂತ ಭದ್ರತಾ ವ್ಯವಸ್ಥೆ ಬಿಗಿಗೊಳಿಸಿದ್ದಾರೆ. ಇದಕ್ಕಾಗಿ ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪ್ರಮುಖ ಪ್ರದೇಶಗಳಲ್ಲಿ ಹೆಚ್ಚುವರಿ ಗಸ್ತು ಮತ್ತು ವಿಶೇಷ ಘಟಕಗಳನ್ನು ನಿಯೋಜಿಸಲಾಗಿದೆ ಎಂದು ಡಿಸಿಪಿ (ದಕ್ಷಿಣ) ಅಂಕಿತ್ ಚೌಹಾಣ್ ಹೇಳಿದ್ದಾರೆ. ವಾಹನಗಳ ದಟ್ಟಣೆ ನಿಯಂತ್ರಿಸಲು ಮತ್ತು ಡಿಂಕ್ ಅಂಡ್ ಡ್ರೈವ್ ಗೆ ಸಂಬಂಧಿಸಿದಂತೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಗಟ್ಟಲು 21 ಆಯಕಟ್ಟಿನ ಸ್ಥಳಗಳಲ್ಲಿ ಭದ್ರತಾ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಕ್ವಿಕ್ ರಿಯಾಕ್ಷನ್ ಟೀಂಗಳು (ಕ್ಯೂಆರ್‌ಟಿಗಳು) 15 ನಿರ್ಣಾಯಕ ಪಾಯಿಂಟ್‌ಗಳಲ್ಲಿ ಸ್ಥಾಪಿಸಲಾಗಿದೆ. 38 ಪಿಸಿಆರ್ ವ್ಯಾನ್‌ಗಳನ್ನು ಸನ್ನದ್ಧವಾಗಿ ಇರಿಸಲಾಗಿದೆ ಎಂದು ಡಿಸಿಪಿ ಅಂಕಿತ್ ಚೌಹಾಣ್ ಮಾಹಿತಿ ನೀಡಿದ್ದಾರೆ.
ದೆಹಲಿ ಭದ್ರತೆಗೆ 10 ಸಾವಿರ ಸಿಬ್ಬಂದಿ:ದೆಹಲಿಯಲ್ಲಿ 10,000ಕ್ಕೂ ಹೆಚ್ಚು ಅಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದು, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಅರೆಸೇನಾ ಪಡೆಗಳು ನಗರದ ಗಡಿಗಳಲ್ಲಿ ಬೀಡುಬಿಟ್ಟಿವೆ. ವಿಶೇಷ ವಾಹನಗಳು, ಸಿಸಿಟಿವಿ ಕ್ಯಾಮೆರಾಗಳು ಮತ್ತು ಇತರ ಕಣ್ಗಾವಲು ಉಪಕರಣಗಳೊಂದಿಗೆ ಸುಸಜ್ಜಿತವಾದ ಮೇಲ್ವಿಚಾರಣೆ ಮತ್ತು ಗಸ್ತು ಹಾಕಲಾಗಿದೆ. ನಗರದಾದ್ಯಂತ ಪ್ರಮುಖ ಪ್ರದೇಶಗಳ ಮೇಲೆ ಕಣ್ಣಿಡಲು ವ್ಯವಸ್ಥೆ ಮಾಡಲಾಗಿದೆ.
ಕಾನೂನು ಉಲ್ಲಂಘಿಸಿದರೆ ಸುಮ್ಮನಿರಲ್ಲ- ಎಚ್ಚರಿಕೆ:2025ಕ್ಕೆ ಸುರಕ್ಷಿತ ಮತ್ತು ಸಂತೋಷದಾಯಕ ಸ್ವಾಗತ ಕೋರಲು ಪೊಲೀಸ್ ಅಧಿಕಾರಿಗಳು ಸನ್ನದ್ದವಾಗಿದ್ದಾರೆ. ಕಾನೂನು ಉಲ್ಲಂಘನೆಗಳನ್ನು ಯಾವುದೇ ಕಾರಣ್ಕೂ ಸಹಿಸಲಾಗುವುದಿಲ್ಲ ಎಂದು ಇದೇ ವೇಳೆ ಡಿಸಿಪಿ ಎಚ್ಚರಿಕೆ ರವಾನಿಸಿದ್ದಾರೆ