ಶ್ರೀನಗರ (ಜಮ್ಮು ಮತ್ತು ಕಾಶ್ಮೀರ):ಭಯೋತ್ಪಾದನೆಗೆ ನಿಧಿ ಸಂಗ್ರಹ ಪ್ರಕರಣದಲ್ಲಿ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್‌ಗೆ ಮರಣದಂಡನೆ ವಿಧಿಸುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸಲ್ಲಿಸಿರುವ ಅರ್ಜಿಯ ವಿಚಾರಣೆಯಿಂದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಅಮಿತ್ ಶರ್ಮಾ ಗುರುವಾರ ಹಿಂದೆ ಸರಿದಿದ್ದಾರೆ.
ನ್ಯಾಯಮೂರ್ತಿಗಳ ರೋಸ್ಟರ್‌ನಲ್ಲಿ ಬದಲಾವಣೆಯಿಂದಾಗಿ ನ್ಯಾ. ಪ್ರತಿಭಾ ಎಂ. ಸಿಂಗ್ ನೇತೃತ್ವದ ವಿಭಾಗೀಯ ಪೀಠದ ಮುಂದೆ ಪ್ರಕರಣವನ್ನು ಪಟ್ಟಿ ಮಾಡಲಾಗಿದೆ. ಇದೇ ವೇಳೆ, ಅಮಿತ್ ಶರ್ಮಾ ಸದಸ್ಯರಲ್ಲದ ಮತ್ತೊಂದು ಪೀಠದ ಮುಂದೆ ಆಗಸ್ಟ್ 9ರಂದು ವಿಚಾರಣೆಗೆ ನಿಗದಿ ಮಾಡಿ ಎಂದು ನ್ಯಾ. ಪ್ರತಿಭಾ ಸಿಂಗ್ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್) ಮುಖ್ಯಸ್ಥನಾಗಿರುವ ಯಾಸಿನ್ ಮಲಿಕ್ ಪ್ರಸ್ತುತ ತಿಹಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಇಂದು ಅರ್ಜಿ ವಿಚಾರಣೆ ವೇಳೆ, ಜೈಲಿನಿಂದಲೇ ವರ್ಚುಯಲ್ ಮೂಲಕ ಹಾಜರು ಪಡಿಸಲಾಯಿತು. ಮುಂದಿನ ವಿಚಾರಣೆಗೂ ವರ್ಚುಯಲ್ ಮೂಲಕ ಹಾಜರು ಪಡಿಸುವುದನ್ನು ಮುಂದುವರಿಸುವಂತೆ ನ್ಯಾಯ ಪೀಠವು ನಿರ್ದೇಶಿಸಿದೆ.
ಯಾಸಿನ್ ಮಲಿಕ್‌ಗೆ ಮರಣದಂಡನೆ ಕೋರಿ ಎನ್‌ಐಎ 2023ರ ಮೇ 29ರಂದು ಅರ್ಜಿ ಸಲ್ಲಿಸಿದೆ. ಈ ಸಂಬಂಧ ಮಲಿಕ್‌ಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿ, ವಿಚಾರಣೆ ಸಂದರ್ಭದಲ್ಲಿ ಹಾಜರಿರುವಂತೆ ಸೂಚಿಸಿತ್ತು. ಆದರೆ, ಜೈಲಿನ ಅಧಿಕಾರಿಗಳು, ಯಾಸಿನ್ನನ್ನು ಅತ್ಯಂತ ಅಪಾಯಕಾರಿ ಕೈದಿ ಎಂದು ಪರಿಗಣಿಸಲಾಗಿದೆ. ಆದ್ದರಿಂದ ವರ್ಚುಯಲ್ ಮೂಲಕ ಹಾಜರು ಪಡಿಸಲು ಅವಕಾಶ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದರು. ಈ ಮನವಿಯನ್ನು ಉಚ್ಚ ನ್ಯಾಯಾಲಯವು ಪುರಸ್ಕರಿಸಿತ್ತು.
ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ-ಯುಎಪಿಎ ಮತ್ತು ಭಾರತೀಯ ದಂಡ ಸಂಹಿತೆ ಅಡಿ ದೋಷಿ ಎಂದು ಸಾಬೀತಾಗಿರುವುದರಿಂದ 2022ರ ಮೇ 24ರಂದು ವಿಚಾರಣಾ ನ್ಯಾಯಾಲಯವು ಮಲಿಕ್‌ಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಅಲ್ಲದೇ, ಯುಎಪಿಎ ಅಡಿಯಲ್ಲಿನ ಆರೋಪಗಳನ್ನು ಒಳಗೊಂಡಂತೆ ಇತರ ಆರೋಪಗಳ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.
ಜೀವಾವಧಿ ಶಿಕ್ಷೆಯ ವಿರುದ್ಧ ಎನ್‌ಐಎ ಮೇಲ್ಮನವಿ ಸಲ್ಲಿಸಿದ್ದು, ಒಬ್ಬ ಉಗ್ರಗಾಮಿಯು ಕೇವಲ ಜೀವಾವಧಿ ಶಿಕ್ಷೆಯನ್ನು ಮಾತ್ರ ಪಡೆಯಲು ಸಾಧ್ಯವಿಲ್ಲ. ಇಂತಹ ಪ್ರಕರಣಗಳಲ್ಲಿ ಮರಣದಂಡನೆ ವಿಧಿಸಲು ವಿಫಲವಾದರೆ ಶಿಕ್ಷೆಯ ನೀತಿ ದುರ್ಬಲವಾಗುತ್ತದೆ. ಭಯೋತ್ಪಾದಕರು ಮರಣದಂಡನೆಯಿಂದ ತಪ್ಪಿಸಿಕೊಳ್ಳುವ ಮಾರ್ಗಕ್ಕೆ ಅನುಮತಿಸಿದಂತಾಗುತ್ತದೆ. ಸೈನಿಕರು ಮತ್ತು ನಾಗರಿಕರ ಜೀವಹಾನಿಗೆ ಕಾರಣವಾದ ಅಪರಾಧಗಳ ತೀವ್ರತೆಯನ್ನು ಗಮನಿಸಿದರೆ ಜೀವಾವಧಿ ಶಿಕ್ಷೆ ಸಾಕಾಗುವುದಿಲ್ಲ ಎಂಬುದು ತನಿಖಾ ತಂಡದ ವಾದವಾಗಿದೆ.
ಇದನ್ನೂ ಓದಿ:ನಿಷೇಧದ ನಡುವೆಯೂ ಸುಪ್ರೀಂಕೋರ್ಟ್‌ಗೆ ಯಾಸಿನ್ ಮಲಿಕ್ನನ್ನು ಖುದ್ದು ಹಾಜರು ಪಡಿಸಿದ ಅಧಿಕಾರಿಗಳು.. ನಾಲ್ವರು ಸಸ್ಪೆಂಡ್