ನವದೆಹಲಿ:ನಾಗರಿಕ ಸೇವಾ ಪರೀಕ್ಷೆಯ (ಯುಪಿಎಸ್ಸಿ) ನಿಯಮಗಳನ್ನು ಉಲ್ಲಂಘಿಸಿ, ಅಂಗವೈಕಲ್ಯ ಕೋಟಾದಡಿ ಅಕ್ರಮವಾಗಿ ಹುದ್ದೆ ಪಡೆದ ಆರೋಪ ಎದುರಿಸುತ್ತಿರುವ ಐಎಎಸ್ ಟ್ರೈನಿ ಅಧಿಕಾರಿ ಪೂಜಾ ಖೇಡ್ಕರ್ ವಿರುದ್ಧ ದಾಖಲಾದ ಕ್ರಿಮಿನಲ್ ಮೊಕದ್ದಮೆಯಲ್ಲಿ ನಿರೀಕ್ಷಣಾ ಜಾಮೀನು ನೀಡಲು ದೆಹಲಿ ಹೈಕೋರ್ಟ್ ಸೋಮವಾರ ನಿರಾಕರಿಸಿದೆ.
ತಮ್ಮ ವಿರುದ್ಧದ ಪ್ರಕರಣದಲ್ಲಿ ಬಂಧನದಿಂದ ತಪ್ಪಿಸಿಕೊಳ್ಳಲು ಪೂಜಾ ಖೇಡ್ಕರ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಚಂದ್ರಧಾರಿ ಸಿಂಗ್ ಅವರ ಪೀಠ, "ಸಾಂವಿಧಾನಿಕ ಸಂಸ್ಥೆಯಾದ ಯುಪಿಎಸ್ಸಿ ಹಾಗೂ ಸಮಾಜಕ್ಕೆ ಮಾಡಿದ ವಂಚನೆಯ ಪ್ರಕರಣ ಇದಾಗಿದೆ. ಹೀಗಾಗಿ, ಆರೋಪಿತೆಯ ವಿರುದ್ಧ ತನಿಖೆ ನಡೆಸುವ ಅಗತ್ಯವಿದೆ" ಎಂದು ಅಭಿಪ್ರಾಯಪಟ್ಟಿತು.
ಬಂಧನದ ಮಧ್ಯಂತರ ರಕ್ಷಣೆಯೂ ತೆರವು:ಪೂಜಾ ಅವರನ್ನು ಪ್ರಕರಣದಲ್ಲಿ ಸದ್ಯಕ್ಕೆ ಬಂಧನ ಮಾಡದಂತೆ ಈ ಹಿಂದೆ ನೀಡಿದ್ದ ಮಧ್ಯಂತರ ರಕ್ಷಣೆಯನ್ನೂ ತೆರವು ಮಾಡಿರುವ ಹೈಕೋರ್ಟ್, ಆರೋಪಿತೆಯ ವಿರುದ್ಧ ಪ್ರಬಲವಾದ ಪ್ರಾಥಮಿಕ ಸಾಕ್ಷಿಗಳಿವೆ. ಬಂಧನ ನಡೆಸದಂತೆ ತಡೆಯುವ ನಿರೀಕ್ಷಣಾ ಜಾಮೀನು ನೀಡಲು ಸಾಧ್ಯವಿಲ್ಲ. ಮಧ್ಯಂತರ ತಡೆಯನ್ನೂ ತೆರವು ಮಾಡಲಾಗಿದೆ ಎಂದಿದೆ.
ಯುಪಿಎಸ್ಸಿಯಂತಹ ಅತ್ಯುಚ್ಛ ಸಾಂವಿಧಾನಿಕ ಸಂಸ್ಥೆಗೆ ಮತ್ತು ಸಮಾಜಕ್ಕೆ ಮಾಡಿದ ದೊಡ್ಡ ವಂಚನೆ ಇದಾಗಿದೆ. ಆಕೆಯ ವಿರುದ್ಧ ತನಿಖೆ ಅಗತ್ಯವಿದೆ. ಇಲ್ಲವಾದಲ್ಲಿ ಇದು ಪರೀಕ್ಷಾರ್ಥಿಗಳಿಗೆ ಮಾಡಿದ ದ್ರೋಹವಾಗುತ್ತದೆ ಎಂದು ಇದೇ ವೇಳೆ ಅಭಿಪ್ರಾಯಪಟ್ಟಿದೆ.