ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧಿತರಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನವನ್ನು ರೋಸ್ ಅವೆನ್ಯೂ ಕೋರ್ಟ್ ಇಂದು ಏಪ್ರಿಲ್ 23ರವರೆಗೆ ವಿಸ್ತರಿಸಿದೆ. ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಈ ಆದೇಶ ಹೊರಡಿಸಿದರು.
ಇಂದಿಗೆ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನ ಕೊನೆಗೊಂಡಿದ್ದು, ಅವರನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಇನ್ನೊಂದೆಡೆ, ತಮ್ಮ ಬಂಧನವನ್ನು ಎತ್ತಿ ಹಿಡಿದ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಇಡಿಗೆ ನೋಟಿಸ್ ನೀಡಿತು. ಏ.29ರಂದು ಮುಂದಿನ ವಿಚಾರಣೆ ನಡೆಸುವುದಾಗಿ ತಿಳಿಸಿದ್ದರಿಂದ ಜೈಲುವಾಸ ಮುಂದುವರಿದಿದೆ.
ಕೇಜ್ರಿವಾಲ್‌ರನ್ನು ಜೈಲಿನಿಂದ ಬಿಡುಗಡೆ ಮಾಡಬೇಕೆಂಬ ಮನವಿ ತಿರಸ್ಕರಿಸಿರುವ ಸುಪ್ರೀಂ ಕೋರ್ಟ್, ಈ ಕುರಿತು ಇಡಿ ಅಧಿಕಾರಿಗಳಿಂದ ಪ್ರತಿಕ್ರಿಯೆ ಕೇಳಿ ನೋಟಿಸ್ ಜಾರಿ ನೀಡಿದೆ. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಜಾರಿ ನಿರ್ದೇಶನಾಲಯವನ್ನು ಪ್ರತಿನಿಧಿಸಿದ್ದರು. ಕೇಜ್ರಿವಾಲ್ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಗ್ವಿ ವಾದ ಮಂಡಿಸಿದರು.
ಪ್ರಕರಣವೇನು?:ಅಬಕಾರಿ ನೀತಿ ಹಗರಣದ ತನಿಖೆಯಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ತನಿಖೆ ಕೈಗೊಂಡಿತ್ತು. ಅಬಕಾರಿ ನೀತಿ ರದ್ದತಿಗೆ ದೊಡ್ಡ ಮೊತ್ತದ ಲಂಚದ ಬೇಡಿಕೆ ಇಡಲಾಗಿತ್ತು ಎಂದು ಆರೋಪಿಸಲಾಗಿತ್ತು. ಆದರೆ, ಎಎಪಿ ಹಾಗೂ ಕೇಜ್ರಿವಾಲ್ ಈ ಆರೋಪಗಳನ್ನು ಸ್ಪಷ್ಟವಾಗಿ ತಿರಸ್ಕರಿಸಿತ್ತು. ಇಡಿ ಹಲವು ಬಾರಿ ಕೇಜ್ರಿವಾಲ್‌ಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು. ಆದರೆ, ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಕೇಜ್ರಿವಾಲ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ನ್ಯಾಯಾಲಯದಲ್ಲಿ ತಿರಸ್ಕೃತವಾದ ಬೆನ್ನಲ್ಲೇ ಇಡಿ ಅವರನ್ನು ಬಂಧಿಸಿತ್ತು.
ಇದನ್ನೂ ಓದಿ:ದೆಹಲಿ ಮದ್ಯ ನೀತಿ ಹಗರಣ: ಕವಿತಾ ನ್ಯಾಯಾಂಗ ಬಂಧನ 9 ದಿನ ವಿಸ್ತರಣೆ, ಸಿಬಿಐ ವಿಚಾರಣೆ ಚುರುಕು - kavitha judicial custody extend