ನವದೆಹಲಿ: 2024-25ರ ಮಧ್ಯಂತರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ರಕ್ಷಣಾ ವಲಯಕ್ಕೆ ಹಚ್ಚಿನ ಅನುದಾನ ಕಲ್ಪಿಸಿದೆ. ಹಿಂದಿನ ವರ್ಷ 5.94 ಲಕ್ಷ ಕೋಟಿ ರೂ.ಗಳಷ್ಟು ಒದಗಿಸಲಾಗಿತ್ತು. ಈ ಬಾರಿ ರಕ್ಷಣಾ ವಲಯದ ಬಜೆಟ್‌ಅನ್ನು 6.21 ಲಕ್ಷ ಕೋಟಿ ರೂ.ಗೆ ಹೆಚ್ಚಿಸಿದ್ದು, ಶೇ.4.72ರಷ್ಟು ಅನುದಾನ ಹೆಚ್ಚುವರಿ ನೀಡಲಾಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಸಂಸತ್ತಿನಲ್ಲಿ ಮಂಡಿಸಿದ ಒಟ್ಟು ಬಜೆಟ್‌ನಲ್ಲಿ ರಕ್ಷಣಾ ಸಚಿವಾಲಯಕ್ಕೆ ಶೇ.13ರಷ್ಟು ಬಜೆಟ್ ಹಂಚಿಕೆಯಾಗಿದೆ. ರಕ್ಷಣಾ ಸಚಿವಾಲಯದ ಪ್ರಕಾರ, ಹೆಚ್ಚಿನ ಬಜೆಟ್ ಹಂಚಿಕೆಯು ಸಶಸ್ತ್ರ ಪಡೆಗಳಿಗೆ ಅತ್ಯಾಧುನಿಕ, ತಂತ್ರಜ್ಞಾನ ಆಧಾರಿತ ಶಸ್ತ್ರಾಸ್ತ್ರಗಳು, ಯುದ್ಧ ವಿಮಾನಗಳು, ಹಡಗುಗಳು, ಮಾನವರಹಿತ ವೈಮಾನಿಕ ವಾಹನಗಳು, ಡ್ರೋನ್‌ಗಳು ಮತ್ತು ವಿಶೇಷ ವಾಹನಗಳೊಂದಿಗೆ ಸಜ್ಜುಗೊಳಿಸಲು ಅನುಕೂಲವಾಗುತ್ತದೆ.
ಸುಖೋಯ್-30 ವಿಮಾನಗಳ ಯೋಜಿತ ಆಧುನೀಕರಣದ ಜೊತೆಗೆ ವಿಮಾನದ ಹೆಚ್ಚುವರಿ ಸಂಗ್ರಹಣೆ, ಮಿಗ್ 29 ವಿಮಾನದ ಸುಧಾರಿತ ಎಂಜಿನ್‌ಗಳು, ಸಾರಿಗೆ ವಿಮಾನ ಸಿ-295 ಮತ್ತು ಕ್ಷಿಪಣಿ ವ್ಯವಸ್ಥೆಗಳಿಗೆ ಬಜೆಟ್‌ನಲ್ಲಿ ಅನುದಾನ ಒದಗಿಸಲಾಗಿದೆ. ಇದಲ್ಲದೇ, ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಮತ್ತಷ್ಟು ವೇಗ, ದೇಶೀಯ ಉತ್ಪಾದನೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಖಚಿತಪಡಿಸಿಕೊಳ್ಳಲು ಹೆಚ್ಚುವರಿಯಾಗಿ ಅನುದಾನ ಕಲ್ಪಿಸಲಾಗುತ್ತದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.