ಮುಂಬೈ (ಮಹಾರಾಷ್ಟ್ರ):ಶಿವಸೇನೆಯ (ಉದ್ಧವ್ ಠಾಕ್ರೆ ಬಣ) ಪ್ರಮುಖ ನಾಯಕ, ಸಂಸದ ಸಂಜಯ್ ರಾವುತ್ ಅವರಿಗೆ ಮಾನನಷ್ಟ ಪ್ರಕರಣದಲ್ಲಿ 15 ದಿನಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಬಿಜೆಪಿ ನಾಯಕ ಕಿರಿಟ್ ಸೋಮಯ್ಯ ಅವರ ಪತ್ನಿ ಮೇಧಾ ಸೋಮಯ್ಯ ಅವರು ಹೂಡಿದ್ದ ಮಾನನಷ್ಟ ಪ್ರಕರಣದಲ್ಲಿ ಮುಂಬೈ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ. ಇದರ ಬೆನ್ನಲ್ಲೇ, ಅವರು ಜಾಮೀನು ಕೂಡ ಪಡೆದಿದ್ದಾರೆ.
ಮೇಧಾ ಸೋಮಯ್ಯ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮೆಟ್ರೋಪಾಲಿಟನ್ ಕೋರ್ಟ್ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 500 ರ ಅಡಿಯಲ್ಲಿ ರಾವುತ್‌ಗೆ 25 ಸಾವಿರ ರೂಪಾಯಿ ದಂಡ ಹಾಗೂ 15 ದಿನಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿತು.
ಪ್ರಕರಣವೇನು?:ಮೇಧಾ ಸೋಮಯ್ಯ ಅವರು ವಕೀಲ ವಿವೇಕಾನಂದ ಗುಪ್ತಾ ಮೂಲಕ ಸಲ್ಲಿಸಿದ ದೂರಿನಲ್ಲಿ ರಾವುತ್ ಅವರು ನನ್ನ ಮತ್ತು ಪತಿಯ ವಿರುದ್ಧ ಆಧಾರರಹಿತ ಮತ್ತು ಮಾನನಷ್ಟ ಆರೋಪ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಮೀರಾ ಭಾಯಂದರ್ ಮುನ್ಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ 100 ಕೋಟಿ ರೂಪಾಯಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ರಾವುತ್ ಆರೋಪಿಸಿದ್ದರು.
ರಾವುತ್ ಅವರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಗಳು ಮಾನಹಾನಿಕರವಾಗಿವೆ. ಸಾರ್ವಜನಿಕರ ದೃಷ್ಟಿಯಲ್ಲಿ ನನ್ನ ಚಾರಿತ್ರ್ಯ ಹರಣ ಮಾಡಲು ಹೇಳಿಕೆಗಳನ್ನು ನೀಡಲಾಗಿದೆ ಎಂದು ಮೇಧಾ ಅವರು ದೂರಿದ್ದರು.