ಹೈದರಾಬಾದ್:ಕಣ್ಣೆದುರೇ ಪತಿ ಮತ್ತು ಇಬ್ಬರು ಪುತ್ರಿಯರು ರೈಲಿಗೆ ಸಿಲುಕಿ ಮೃತಪಟ್ಟಿರುವ ದೃಶ್ಯವನ್ನು ಕಂಡು ಪತ್ನಿ ತೀವ್ರ ಆಘಾತಕ್ಕೆ ಒಳಗಾಗಿರುವ ಹೃದಯವಿದ್ರಾವಕ ಘಟನೆ ಹೈದರಾಬಾದ್‌ನ ಉಪನಗರದ ಮೆಡ್ಚಲ್ ಗೌಡವೆಲ್ಲಿ ರೈಲು ನಿಲ್ದಾಣದ ಬಳಿ ಸಂಭವಿಸಿದೆ.
ಪತಿ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಹಳಿ ದುರಸ್ತಿ ಕೆಲಸಕ್ಕೆ ತೆರಳಿದ್ದರು. ಪತಿಗಾಗಿ ಮಧ್ಯಾಹ್ನದ ಹೊತ್ತಿಗೆ ಅವರ ಪತ್ನಿಯು ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಕರೆದುಕೊಂಡು ಬುತ್ತಿ ಕಟ್ಟಿಕೊಂಡು ಬಂದಿದ್ದರು. ನಂತರ, ಪತಿ, ಪತ್ನಿ, ಮಕ್ಕಳು ಸೇರಿ ಎಲ್ಲರೂ ಊಟ ಮಾಡಿದ್ದಾರೆ. ಸ್ವಲ್ಪ ಹೊತ್ತು ಕಾದರೆ ಎಲ್ಲರೂ ಒಟ್ಟಿಗೆ ಮನೆಗೆ ಹೋಗಬಹುದು ಅಂತ ಅಂದುಕೊಂಡಿದ್ದರು. ಹಾಗಾಗಿ ಕುಟುಂಬದ ಸದಸ್ಯರು ಅದೇ ಸ್ಥಳದಲ್ಲಿ ಉಳಿದರು.
ತಂದೆ ರೈಲು ಹಳಿಯಲ್ಲಿ ನಡೆದುಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದರೆ, ಮಕ್ಕಳು ಸಮೀಪದಲ್ಲಿ ಆಟವಾಡುತ್ತಿದ್ದರು. ರೈಲು ಬರುವ ಸದ್ದು ಕೇಳಿ ಹಿಂತಿರುಗಿ ನೋಡಿದಾಗ ಮಕ್ಕಳಿಬ್ಬರೂ ಹಳಿಯ ಮಧ್ಯದಲ್ಲಿ ನಿಂತು ಕೂಗಾಡುತ್ತಿರುವುದು ಕಂಡುಬಂದಿತ್ತು. ಕರ್ತವ್ಯದಲ್ಲಿದ್ದ ತಂದೆಯು ಮಕ್ಕಳನ್ನು ರಕ್ಷಿಸಲು ಮುಂದಾದರೂ, ಅವರ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಮಕ್ಕಳನ್ನು ಕಾಪಾಡಲು ಹೋದ ಸಂದರ್ಭದಲ್ಲೇ ತಂದೆಯು ಮೃತಪಟ್ಟಿದ್ದಾನೆ. ಕ್ಷಣಾರ್ಧದಲ್ಲಿ ರೈಲಿಗೆ ಸಿಲುಕಿ ಇಬ್ಬರು ಪುತ್ರಿಯರು ಮತ್ತು ಅವರನ್ನು ಕಾಪಾಡಲು ಹೋದ ಪತಿ ಸಾವನ್ನಪ್ಪಿರುವ ದೃಶ್ಯ ಕಂಡು ಪತ್ನಿಗೆ ಆಘಾತವಾಗಿದೆ. ಈ ಹೃದಯವಿದ್ರಾವಕ ಘಟನೆ ಹೈದರಾಬಾದ್‌ನ ಉಪನಗರದ ಮೆಡ್ಚಲ್ ಗೌಡವೆಲ್ಲಿ ರೈಲು ನಿಲ್ದಾಣದ ಬಳಿ ಭಾನುವಾರ ಸಂಜೆ ನಡೆದಿದೆ.
ಮೆಡ್ಚಲ್ ಪಟ್ಟಣದ ರಾಘವೇಂದ್ರನಗರ ಕಾಲೋನಿಯಲ್ಲಿ ವಾಸವಿದ್ದ ಟಿ.ಕೃಷ್ಣ (38) ಗೌಡವೆಲ್ಲಿ ರೈಲು ನಿಲ್ದಾಣದಲ್ಲಿ ಕೀಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಕೃಷ್ಣ ಅವರಿಗೆ ಪತ್ನಿ ಕವಿತಾ ಮತ್ತು ಇಬ್ಬರು ಪುತ್ರಿಯರಾದ ವರ್ಷಿತಾ (10) ಮತ್ತು ವಾರಣಿ (7) ಇದ್ದಾರೆ. ಭಾನುವಾರ ಮಧ್ಯಾಹ್ನ ಕವಿತಾ ಪತಿಗೆ ಊಟ ತೆಗೆದುಕೊಂಡು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಪತಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ತೆರಳಿದ್ದರು. ಪತಿ ಕೆಲಸದಿಂದ ಬರುವವರೆಗೂ ಇಲ್ಲಿ ಇದ್ದು, ತಾವೆಲ್ಲ ಒಟ್ಟಿಗೆ ಮನೆಗೆ ಹೋಗೋಣ ಎಂದು ಮಾತನಾಡಿಕೊಂಡಿದ್ದರು. ಹೆಂಡತಿ, ಮಕ್ಕಳು ಕಾಯುತ್ತಾ ಕೆಲ ಹೊತ್ತು ಅಲ್ಲೇ ಸಮಯ ಕಳೆಯುತ್ತಿದ್ದರು.
ಕೃಷ್ಣ ಟ್ರ್ಯಾಕ್ ಕೆಲಸದಲ್ಲಿ ತೊಡಗಿದ್ದರೆ, ಮಕ್ಕಳು ಪಕ್ಕದಲ್ಲಿ ಆಟವಾಡುತ್ತಿದ್ದರು. ಮಕ್ಕಳು ಹಠಾತ್ತನೆ ಟ್ರ್ಯಾಕ್ ಮೇಲೆ ಹೋಗಿರುವುದನ್ನು ಪೋಷಕರು ಗಮನಿಸಿರಲಿಲ್ಲ. ಅಷ್ಟರಲ್ಲಿ ರಾಯಲಸೀಮಾ ಎಕ್ಸ್ಪ್ರೆಸ್ ರೈಲಿನ ಸದ್ದು ಕೇಳಿದ ಕೃಷ್ಣ ಹಿಂದೆ ತಿರುಗಿ ನೋಡಿದಾಗ ಇಬ್ಬರು ಮಕ್ಕಳು ಹಳಿಯ ಮಧ್ಯದಲ್ಲಿ ಆಟವಾಡುತ್ತಿರುವುದು ಕಂಡಿದ್ದಾರೆ. ಬರುತ್ತಿದ್ದ ರೈಲಿನಿಂದ ಮಕ್ಕಳನ್ನು ರಕ್ಷಿಸಲು ಅವರು ಧಾವಿಸಿದರು. ಆದರೆ ಆಗಲೇ ತುಂಬಾ ತಡವಾಗಿತ್ತು. ಮೂವರು ರೈಲಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕ್ಷಣಾರ್ಧದಲ್ಲಿ ಸಂಭವಿಸಿದ ಅಪಘಾತವನ್ನು ಕಂಡು ಕವಿತಾ ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ಪತಿ ಹಾಗೂ ಇಬ್ಬರು ಪುತ್ರಿಯರು ಕಣ್ಣೆದುರೇ ಸಾವನ್ನಪ್ಪಿದಕ್ಕೆ ಪತ್ನಿಗೆ ಆಕಾಶವೇ ಕಳಚಿ ತಲೆಮೇಲೆ ಬಿದ್ದಂತಾಗಿದೆ.
ಇದನ್ನೂ ಓದಿ:ಬಾಬಾ ಸಿದ್ಧನಾಥ ದೇವಸ್ಥಾನದಲ್ಲಿ ಕಾಲ್ತುಳಿತ: 7 ಭಕ್ತರ ಸಾವು, 9 ಮಂದಿಗೆ ಗಾಯ - 7 Died In Stampede In Jehanabad