ಕರ್ನಾಟಕ

karnataka

ETV Bharat / bharat

ಶೀಘ್ರದಲ್ಲೇ ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟ: ಸಿಇಸಿ ರಾಜೀವ್ ಕುಮಾರ್ - J K Assembly Polls - J K ASSEMBLY POLLS

ಜಮ್ಮು ಮತ್ತು ಕಾಶ್ಮೀರದಲ್ಲಿ ಆದಷ್ಟು ಶೀಘ್ರದಲ್ಲಿ ವಿಧಾನಸಭಾ ಚುನಾವಣೆಗಳನ್ನು ನಡೆಸಲಾಗುವುದು ಎಂದು ಸಿಇಸಿ ರಾಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.

ಸಿಇಸಿ ರಾಜೀವ್ ಕುಮಾರ್
ಸಿಇಸಿ ರಾಜೀವ್ ಕುಮಾರ್ (IANS)

By ETV Bharat Karnataka Team

Published : Aug 9, 2024, 6:55 PM IST

ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಶೀಘ್ರದಲ್ಲೇ ವಿಧಾನಸಭಾ ಚುನಾವಣೆ ನಡೆಯಲಿದ್ದು, ಆಯೋಗವು ದಿಲ್ಲಿಗೆ ಮರಳಿದ ಬಳಿಕ ಸಮಗ್ರ ಪರಿಶೀಲನೆ ನಡೆಸಿ ದಿನಾಂಕಗಳನ್ನು ಪ್ರಕಟಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.

ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಮತ್ತು ಡಾ.ಸುಖ್ಬೀರ್ ಸಿಂಗ್ ಸಂಧು ಕೂಡ ಮಾಧ್ಯಮಗೋಷ್ಠಿಯಲ್ಲಿ ಹಾಜರಿದ್ದರು.

"ನಾವು ಈ ಹಿಂದೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇಲ್ಲಿಗೆ ಬಂದಿದ್ದೆವು, ಇಂದು ಮತ್ತೆ ಇಲ್ಲಿಗೆ ಬಂದಿರುವುದಕ್ಕೆ ಸಂತೋಷವಾಗಿದೆ." ಎಂದು ಎಂದು ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹೇಳಿದರು.

2023ರ ಡಿಸೆಂಬರ್​ನಲ್ಲಿ ಸಂಸತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆಯನ್ನು ಅಂಗೀಕರಿಸಿದೆ. ಹೀಗಾಗಿ ಅದಕ್ಕೂ ಮೊದಲು ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ನಡೆಸಲು ಸಾಧ್ಯವಿರಲಿಲ್ಲ ಎಂದು ರಾಜೀವ್ ಕುಮಾರ್ ಹೇಳಿದರು.

"ಜಮ್ಮು ಮತ್ತು ಕಾಶ್ಮೀರದ ಜನರು ಲೋಕಸಭಾ ಚುನಾವಣೆಯ ಸಮಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಿ ಪ್ರಜಾಪ್ರಭುತ್ವದಲ್ಲಿ ತಮ್ಮ ನಂಬಿಕೆಯನ್ನು ತೋರಿಸಿದ್ಧಾರೆ. ನಿಮ್ಮ ಸ್ವಂತ ಸರ್ಕಾರವನ್ನು ಆಯ್ಕೆ ಮಾಡಲು ನಿಮಗೆ ಅವಕಾಶ ನೀಡುವ ಸಮಯ ಈಗ ಬಂದಿದೆ. ಹಲವು ದಶಕಗಳಿಂದ ಇಲ್ಲಿ ನಡೆಯದ್ದನ್ನು ನೀವು ಲೋಕಸಭಾ ಚುನಾವಣೆಯ ಸಮಯದಲ್ಲಿ ಮಾಡಿದ್ದೀರಿ. ಜನರು ಅಡಿಪಾಯ ಹಾಕಿದ್ದಾರೆ ಮತ್ತು ಆ ದೃಢವಾದ ಅಡಿಪಾಯದ ಮೇಲೆ ದೊಡ್ಡ ವ್ಯವಸ್ಥೆಯನ್ನು ನಿರ್ಮಿಸುವ ಸಮಯ ಈಗ ಬಂದಿದೆ" ಎಂದು ಅವರು ಹೇಳಿದರು.

ಈ ಸಭೆಯ ಸಮಯದಲ್ಲಿ ಚುನಾವಣಾ ಆಯೋಗವು ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ಪ್ರಾದೇಶಿಕ ರಾಜಕೀಯ ಪಕ್ಷಗಳು ಸೇರಿದಂತೆ ಒಂಬತ್ತು ರಾಜಕೀಯ ಪಕ್ಷಗಳನ್ನು ಭೇಟಿ ಮಾಡಿದೆ ಎಂದು ಅವರು ಹೇಳಿದರು. ಮತದಾನ ಕೇಂದ್ರಗಳು ಮತದಾರರಿಂದ 2 ಕಿ.ಮೀ ವ್ಯಾಪ್ತಿಯಲ್ಲಿರಬೇಕೆಂದು ಪಕ್ಷಗಳ ಪ್ರತಿನಿಧಿಗಳು ಮನವಿ ಮಾಡಿದ್ದಾರೆ. ಮತದಾನ ಕೇಂದ್ರಗಳನ್ನು ಕೊನೆಯ ಕ್ಷಣದಲ್ಲಿ ಘೋಷಿಸಬಾರದು ಮತ್ತು ಸಂಪೂರ್ಣ ಸಿಸಿಟಿವಿ ಕವರೇಜ್ ಇರಬೇಕೆಂಬುದು ಅವರ ಬೇಡಿಕೆಯಾಗಿದೆ ಎಂದು ಅವರು ತಿಳಿಸಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ 90 ವಿಧಾನಸಭಾ ಕ್ಷೇತ್ರಗಳಿವೆ. ಇದರಲ್ಲಿ 74 ಸಾಮಾನ್ಯ, 9 ಎಸ್ಟಿ ಮತ್ತು 7 ಎಸ್ಸಿ ಕ್ಷೇತ್ರಗಳಿವೆ. ಒಟ್ಟು 87.09 ಲಕ್ಷ ಮತದಾರರಿದ್ದಾರೆ. ಇದರಲ್ಲಿ 44.46 ಲಕ್ಷ ಪುರುಷರು, 44.62 ಲಕ್ಷ ಮಹಿಳೆಯರು ಮತ್ತು 169 ತೃತೀಯ ಲಿಂಗಿಗಳಿದ್ದಾರೆ. 82,590 ವಿಕಲಚೇತನರು, 73,943 ಹಿರಿಯ ನಾಗರಿಕರು, 2,660 ಶತಾಯುಷಿಗಳು ಮತ್ತು 76,092 ಸೇವಾ ಮತದಾರರು ಇದ್ದಾರೆ. 3.71 ಲಕ್ಷ ಮಂದಿ ಮೊದಲ ಬಾರಿಗೆ ಮತ ಚಲಾಯಿಸುತ್ತಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ಮಾಹಿತಿ ನೀಡಿದರು.

ಇದನ್ನೂ ಓದಿ: ಬುದ್ಧದೇವ್ ಭಟ್ಟಾಚಾರ್ಜಿಗೆ ಸರ್ಕಾರದ 'ಗನ್ ಸೆಲ್ಯೂಟ್'​ ಬೇಡ: ಸಿಪಿಐ-ಎಂ - Buddhadeb Bhattacharjee

ABOUT THE AUTHOR

...view details