ಜೌನ್ಪುರ (ಉತ್ತರ ಪ್ರದೇಶ): ಸಿಕ್ರಾರಾ ಪ್ರದೇಶದ ಸಮದ್‌ಗಂಜ್ ಮಾರುಕಟ್ಟೆ ಬಳಿ ಭಾನುವಾರ ತಡರಾತ್ರಿ ಕಾರ್ಮಿಕರಿದ್ದ ಟ್ರ್ಯಾಕ್ಟರ್ಗೆ ಬಸ್ ಡಿಕ್ಕಿ ಹೊಡೆದಿದೆ. ಈ ರಸ್ತೆ ಅಪಘಾತದಲ್ಲಿ ಆರು ಕಾರ್ಮಿಕರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಟ್ರ್ಯಾಕ್ಟರ್ನಲ್ಲಿ ಪ್ರಯಾಣಿಸುತ್ತಿದ್ದ ಕಾರ್ಮಿಕರು ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದರು. ಅಪಘಾತಕ್ಕೆ ಒಳಗಾಗಿರುವ ಬಸ್ ಪ್ರಯಾಗ್‌ರಾಜ್‌ನಿಂದ ಗೋರಖ್‌ಪುರಕ್ಕೆ ಹೋಗುತ್ತಿತ್ತು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ.ಶೈಲೇಂದ್ರ ಕುಮಾರ್ ಸಿಂಗ್ ತಿಳಿಸಿದರು.
ವಾಹನದ ಕೆಳಗೆ ಸಿಲುಕಿದ್ದ ಶವಗಳು: ದುರ್ಘಟನೆಯಲ್ಲಿ 5 ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ಆಡಳಿತಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಟ್ರ್ಯಾಕ್ಟರ್ ಅಡಿ ಸಿಲುಕಿಕೊಂಡಿದ್ದ ಮೃತ ದೇಹಗಳನ್ನು ಹೊರ ತೆಗೆಯಲಾಯಿತು. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದ ಓರ್ವ ಕಾರ್ಮಿಕ ಮೃತಪಟ್ಟಿದ್ದಾನೆ. ಅಪಘಾತ ಸಂಭವಿಸಿದಾಗ ಸಮೀಪದ ಗ್ರಾಮಸ್ಥರು ಮಲಗಿದ್ದರು. ಶಬ್ದ ಕೇಳಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳದಲ್ಲಿ ಜಮಾಯಿಸಿದ್ದರು.
ಅಲಿಶಾಪುರ ನಿವಾಸಿ ನೀರಜ್ ಸರೋಜ್ (28), ರಾಜೇಶ್ ಸರೋಜ್ (45), ಸಂಗ್ರಾಮ್ ಸರೋಜ್ (25), ಚಾಯ್ ಮುಸಾಹರ್ (20), ವೀರಪಾಲ್‌ಪುರ ನಿವಾಸಿ ಅತುಲ್ ಸರೋಜ್ (30), ಬತುವವಾರ್ ನಿವಾಸಿ ಗೋವಿಂದ ಬಿಂದ್ (30) ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.