ಲಖನೌ(ಉತ್ತರ ಪ್ರದೇಶ):ವರನೊಬ್ಬ ವಧುವಿನ ಕಡೆಯವರುಸ್ಕಾರ್ಪಿಯೋ ಕಾರು ಕೊಡಿಸದಿದ್ದಕ್ಕೆ ಮದುವೆ ನಿರಾಕರಿಸಿದ ಘಟನೆ ನಡೆದಿದೆ. ಮದುವೆಗೂ ಮುನ್ನ ವರ ವಧುವಿನ ತಾಯಿಗೆ ಕರೆ ಮಾಡಿ ಸ್ಕಾರ್ಪಿಯೋ ಕಾರಿಗೆ ಬೇಡಿಕೆ ಇಟ್ಟಿದ್ದ. ಈ ಸಂಬಂಧ ವಧುವಿನ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇನ್ನು ವಧುವಿನ ಕಡೆಯವರು ಮದುವೆ ಮಂಟಪಕ್ಕೆ ಹಣ ಪಾವತಿ ಸೇರಿದಂತೆ ಇತರ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ದೂರಿನ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪೊಲೀಸರ ಪ್ರಕಾರ, ಮಲಿಹಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದ ಮಹಿಳೆಯೊಬ್ಬರು ತನ್ನ ಮಗಳ ಮದುವೆಯನ್ನು ಠಾಕೂರ್ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಮಾಧವಪುರದ ನಿವಾಸಿ ಸರೋಜ್ ಅವರೊಂದಿಗೆ ನಿಶ್ಚಯಿಸಿದ್ದರು. ಕಳೆದ ವರ್ಷ ಡಿಸೆಂಬರ್ 17 ರಂದು ಮದುವೆ ನಿಶ್ಚಿತಾರ್ಥ ನಡೆದಿತ್ತು. ಜನವರಿ 26 ರಂದು ಮದುವೆ ಮತ್ತು ಫೆಬ್ರವರಿ 22 ರಂದು ತಿಲಕ ಸಮಾರಂಭವನ್ನು ನಿಗದಿಪಡಿಸಲಾಗಿತ್ತು. ಆದರೆ, ಜನವರಿ 25ರಂದು ವರ, ವಧುವಿನ ತಾಯಿಗೆ ಕರೆ ಮಾಡಿ ಸ್ಕಾರ್ಪಿಯೋ ಕಾರು ನೀಡದಿದ್ದರೆ ಮದುವೆಯಾಗುವುದಿಲ್ಲ ಎಂದು ಹೇಳಿರುವುದಾಗಿ, ವಧುವಿನ ತಾಯಿ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ತಿಳಿದು ಬಂದಿದೆ.
ದೂರಿನಲ್ಲಿ ವಧುವಿನ ತಾಯಿ ಹೇಳಿದ್ದಿಷ್ಟು:"ವರನ ಕಡೆಯವರ ಬೇಡಿಕೆಯಂತೆ ವರನ ಶಾಪಿಂಗ್ಗೆ ಲಕ್ಷಾಂತರ ರೂಪಾಯಿ ಹಣ ನೀಡಿದ್ದೇನೆ. ಇದಲ್ಲದೇ, ಅವರ ಪ್ರತಿಯೊಂದು ಸಣ್ಣ ಬೇಡಿಕೆಯನ್ನು ಈಡೇರಿಸಲಾಗಿದೆ. ಮಗಳ ಮದುವೆ ಆಮಂತ್ರಣ ಪತ್ರಿಕೆಗಳನ್ನು ಸಂಬಂಧಿಕರಿಗೆ ಮತ್ತು ನೆರೆಹೊರೆಯವರಿಗೆ ವಿತರಿಸಲಾಗಿದೆ. ಜೊತೆಗೆ ಮದುವೆ ಮಂಟಪ ಮತ್ತು ಊಟದ ವ್ಯವಸ್ಥೆ ಮಾಡಲು ಹಣ ಕೂಡಾ ಪಾವತಿಸಲಾಗಿದೆ. ಜನವರಿ 25ರಂದು ವರ ಕರೆ ಮಾಡಿ ಸ್ಕಾರ್ಪಿಯೋ ಕಾರು ಕೊಡಿಸದಿದ್ದರೆ ಮದುವೆಯಾಗಲು ಸಾಧ್ಯವಿಲ್ಲ ಎಂದು ಹೇಳಿದ" ಎಂದು ವಧುವಿನ ತಾಯಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.