ಪಾಟ್ನಾ/ದೆಹಲಿ: ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪತ್ನಿ, ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಮತ್ತು ಅವರ ಪುತ್ರಿಯರಾದ ಮಿಸಾ ಭಾರತಿ ಮತ್ತು ಹೇಮಾ ಯಾದವ್ಗೆ ಉದ್ಯೋಗಕ್ಕಾಗಿ ಭೂಮಿ ಹಗರಣ ಪ್ರಕರಣದಲ್ಲಿ ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯವು ಶುಕ್ರವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ಮೂವರಿಗೂ ರಿಲೀಫ್ ಸಿಕ್ಕಂತಾಗಿದೆ. ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೈಗೆತ್ತಿಕೊಂಡ ವಿಶೇಷ ನ್ಯಾಯಾಧೀಶರಾದ ವಿಶಾಲ್ ಗೋಗಾನೆ ಅವರ ಪೀಠ, ತಲಾ 1 ಲಕ್ಷ ರೂಪಾಯಿ ಬಾಂಡ್ ಶ್ಯೂರಿಟಿ ಇಡುವಂತೆ ಮಧ್ಯಂತರ ಜಾಮೀನು ನೀಡಿ ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರವರಿ 28ಕ್ಕೆ ಮುಂದೂಡಿದೆ.
ಕಳೆದ ತಿಂಗಳು, ರೈಲ್ವೆ ಜಮೀನು - ಉದ್ಯೋಗಕ್ಕಾಗಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಜಾರಿ ನಿರ್ದೇಶನಾಲಯ ದೆಹಲಿಯ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿತ್ತು. ರಾಬ್ರಿ ದೇವಿ, ಮಿಸಾ ಭಾರ್ತಿ, ಹಿಮಾ ಯಾದವ್, ಹೃದಯಾನಂದ್ ಚೌಧರಿ ಮತ್ತು ಅಮಿತ್ ಕತ್ಯಾಲ್ ಅವರನ್ನು ಆರೋಪಿಗಳೆಂದು ಆರೋಪಪಟ್ಟಿಯಲ್ಲಿ ಹೆಸರಿಸಿ ಚಾರ್ಜ್ ಶೀಟ್ ಸಲ್ಲಿಸಿತ್ತು. ನಂತರ ನ್ಯಾಯಾಲಯ ಫೆ. 9 ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿತ್ತು. ಇದರಂತೆ ರಾಬ್ರಿ, ಮಿಸಾ, ಹೇಮಾ ಅವರು ನ್ಯಾಯಲಯಕ್ಕೆ ಹಾಜರಾಗಿದ್ದರು. ಅಮಿತ್ ಅವರನ್ನು ಇತ್ತೀಚೆಗೆ ಇಡಿ ಬಂಧಿಸಿದ್ದರಿಂದ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು.
ಆರೋಪಿಗಳನ್ನು ತನಿಖೆಯ ಸಂದರ್ಭದಲ್ಲಿ ಬಂಧಿಸದೇ ಇರುವಾಗ, ಈಗೇಕೆ ಆರೋಪಿಗಳನ್ನು ವಶಕ್ಕೆ ಕೇಳುತ್ತಿದ್ದೀರಿ ಎಂದು ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಜಾರಿ ನಿರ್ದೇಶನಾಲಯವನ್ನು ಪ್ರಶ್ನಿಸಿತು. ಕೊನೆಗೆ ರಾಬ್ರಿ ದೇವಿ ಮತ್ತು ಅವರ ಪುತ್ರಿಯರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತು.
ಇಡಿ ಜನವರಿ 1, 2024 ರಂದು ಅಮಿತ್ ಕತ್ಯಾಲ್, ರಾಬ್ರಿ ದೇವಿ, ಮಿಶಾ ಭಾರತಿ, ಹೇಮಾ ಯಾದವ್, ಹೃದಯಾನಂದ್ ಚೌಧರಿ ಮತ್ತು ಎರಡು ಕಂಪನಿಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ), 2002 ರ ನಿಬಂಧನೆಗಳ ಅಡಿ ಪ್ರಾಸಿಕ್ಯೂಷನ್ ದೂರು (ಪಿಸಿ) ದಾಖಲಿಸಿದೆ. ಈಗಾಗಲೇ ಎಕೆ ಇನ್ಫೋಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್, ಎಬಿ ಎಕ್ಸ್ಪೋರ್ಟ್ಸ್ ಪ್ರೈ. Ltd. ಪ್ರಕರಣ ನವದೆಹಲಿಯ ವಿಶೇಷ ನ್ಯಾಯಾಲಯದ (PMLA) ಮುಂದೆ ಇದೆ.