ನವದೆಹಲಿ:I.N.D.I.A ಕೂಟದಲ್ಲಿರುವ ಆಪ್ ಮತ್ತು ಕಾಂಗ್ರೆಸ್ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪ್ರತಿಸ್ಪರ್ಧಿಗಳಾಗಿ ಸೆಣಸಾಡುವುದು ನಿಕ್ಕಿಯಾಗಿದೆ. ಆಮ್ ಆದ್ಮಿ ಪಕ್ಷದ (ಆಪ್) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಯಾರೊಂದಿಗೂ ಚುನಾವಣಾ ಮೈತ್ರಿ ಇಲ್ಲ ಎಂದು ಘೋಷಿಸಿದ ಬೆನ್ನಲ್ಲೇ, ಆಪ್ ಮತ್ತು ಬಿಜೆಪಿ ವೈಫಲ್ಯಗಳ ಶ್ವೇತಪತ್ರವನ್ನು ಕಾಂಗ್ರೆಸ್ ಹೊರಡಿಸಿದೆ.
ದೆಹಲಿಯಲ್ಲಿ ಆಪ್ನ 11 ವರ್ಷ, ಕೇಂದ್ರದಲ್ಲಿ ಬಿಜೆಪಿಯ 10 ವರ್ಷದ ಅಧಿಕಾರದ ವೈಫಲ್ಯವನ್ನು ಟೀಕಿಸುವ 12 ಅಂಶಗಳನ್ನು ಒಳಗೊಂಡಿರುವ 'ಮೌಕಾ ಮೌಕಾ ಹರ್ ಬಾರ್ ಧೋಖಾ' ಎಂಬ ಕಿರುಪುಸ್ತಕವನ್ನು ದೆಹಲಿ ಕಾಂಗ್ರೆಸ್ ಅಧ್ಯಕ್ಷ ದೇವೇಂದ್ರ ಯಾದವ್, ಹಿರಿಯ ನಾಯಕ ಅಜಯ್ ಮಾಕನ್ ಸೇರಿದಂತೆ ಇತರ ನಾಯಕರು ಬುಧವಾರ ಬಿಡುಗಡೆ ಮಾಡಿದರು.
ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದೆಹಲಿ ಕಾಂಗ್ರೆಸ್ ಅಧ್ಯಕ್ಷ ದೇವೇಂದ್ರ ಯಾದವ್, ದೆಹಲಿಯಲ್ಲಿ ಆಪ್ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರಗಳು ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ 11 ವರ್ಷ, ಬಿಜೆಪಿಯ 10 ವರ್ಷಗಳ ಆಡಳಿತದಲ್ಲಿ ಅಭಿವೃದ್ಧಿ ನಗಣ್ಯವಾಗಿದೆ ಎಂದು ಆರೋಪಿಸಿದರು.
ಕೇಜ್ರಿವಾಲ್ದೇಶದಲ್ಲಿಯೇ ಮಹಾನ್ ವಂಚಕ:ಬಳಿಕ ಮಾತನಾಡಿದ ಎಐಸಿಸಿ ಖಜಾಂಚಿ ಅಜಯ್ ಮಾಕೆನ್, ಅರವಿಂದ್ ಕೇಜ್ರಿವಾಲ್ ಅವರು ಜನಲೋಕಪಾಲ್ ಹೋರಾಟದ ಮೂಲಕ ಅಧಿಕಾರಕ್ಕೆ ಬಂದರು. ಇದೀಗ, ಆ ಸಂಸ್ಥೆಯನ್ನೇ ರಚಿಸಲು ಮರೆತಿದ್ದಾರೆ. ಕೇಜ್ರಿವಾಲ್ ಒಬ್ಬ ಫರ್ಜಿವಾಲ್ (ನಕಲಿ ವ್ಯಕ್ತಿ) ಎಂದು ಟೀಕಿಸಿದರು.