ಅನಂತನಾಗ್ (ಜಮ್ಮು ಮತ್ತು ಕಾಶ್ಮೀರ):ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಅಧಿಕಾರಕ್ಕೆ ಬರುವ ಕನಸು ಕಂಡಿದ್ದ ಬಿಜೆಪಿಗೆ ಮುಖಭಂಗವಾಗಿದೆ. ದೇಶದ ಜನರು ಆ ಪಕ್ಷಕ್ಕೆ 240 ಸ್ಥಾನಗಳನ್ನು ಮಾತ್ರ ಕೊಟ್ಟರು. I.N.D.I.A ಕೂಟವು ಹೆಚ್ಚುವರಿ 20 ಸೀಟುಗಳಲ್ಲಿ ಗೆಲುವು ಸಾಧಿಸಿದ್ದರೆ, ಎಲ್ಲ ಬಿಜೆಪಿಗರು ಜೈಲಿನಲ್ಲಿ ಇರುತ್ತಿದ್ದರು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿರುವ ಅವರು, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. 400 ಪಾರ್ ಎನ್ನುತ್ತಿದ್ದರು. ಈಗ ಎಲ್ಲಿದೆ ಅವರ 400 ಪಾರ್. ಕೇವಲ 240 ರಲ್ಲಿ ಮಾತ್ರ ಗೆದ್ದಿದ್ದಾರೆ. ಜನರು ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಇಂಡಿಯಾ ಕೂಟಕ್ಕೆ ಹೆಚ್ಚುವರಿಯಾಗಿ 20 ಸೀಟು ಬಂದಿದ್ದರೆ, ಸರ್ಕಾರ ರಚನೆ ಮಾಡುತ್ತಿದ್ದೆವು. ಈಗಿನ ಎಲ್ಲ ಬಿಜೆಪಿ ನಾಯಕರು ಜೈಲು ಕಂಬಿ ಎಣಿಸುತ್ತಿದ್ದರು. ಅವರೆಲ್ಲರೂ ಅಲ್ಲಿ ಇರಲು ಅರ್ಹರು ಎಂದು ಗುಡುಗಿದರು.
ಮೈತ್ರಿ ಸರ್ಕಾರ ಗೆಲ್ಲಿಸಿ:ಜಮ್ಮು ಕಾಶ್ಮೀರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫ್ರೆನ್ಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಇಲ್ಲಿನ ಜನರ ಅಭಿವೃದ್ಧಿಗಾಗಿ ನಮ್ಮನ್ನು ಬೆಂಬಲಿಸಿ. ಕಾರ್ಯಕರ್ತರು ಬಿಜೆಪಿಗೆ ಭಯಪಡದೇ ಹೋರಾಟ ನಡೆಸಬೇಕು. ಪಕ್ಷದ ಬೆಂಬಲಿಗರು ಪರಸ್ಪರ ದೂಷಿಸದೆ ಒಗ್ಗಟ್ಟಿನಿಂದ ಹೋರಾಡಿ ಎಂದು ಕರೆ ನೀಡಿದರು.
ಕಣಿವೆಯಲ್ಲಿ ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿ ಮಾಡಿಲ್ಲ. ಮೂಲ ಸೌಕರ್ಯಗಳ ಅಭಿವೃದ್ಧಿ ಸ್ಥಗಿತವಾಗಿದೆ. 1 ಲಕ್ಷ ಉದ್ಯೋಗ ನೀಡುವ ಭರವಸೆ ನೀಡಲಾಗಿತ್ತು. ಇದು ಇನ್ನೂ ಸಾಧ್ಯವಾಗಿಲ್ಲ. ನಾವು ಅಧಿಕಾರಕ್ಕೆ ಬಂದರೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಇಲ್ಲಿನ ಯುವಕರಿಗೆ ಆ ಉದ್ಯೋಗಗಳು ಲಭ್ಯವಾಗಲಿವೆ. ಇಲ್ಲಿನ ಜನರು ಬಡವರಾಗಿಯೇ ಉಳಿಯಬೇಕು ಎಂಬುದು ಬಿಜೆಪಿಯ ಉದ್ದೇಶ ಎಂದು ಆರೋಪಿಸಿದರು.