ನವದೆಹಲಿ:ಉತ್ತರ ಪ್ರದೇಶದ ರಾಯ್‌ಬರೇಲಿ ಮತ್ತು ಅಮೇಠಿ ಕಾಂಗ್ರೆಸ್ನ ಭದ್ರಕೋಟೆ. ಇಲ್ಲಿ ಪಕ್ಷದಿಂದ ಯಾರೇ ಸ್ಪರ್ಧಿಸಿದರೂ ಗೆಲುವು ಕಟ್ಟಿಟ್ಟ ಬುತ್ತಿಯಾಗಿತ್ತು. ಆದರೆ, ಪರಿಸ್ಥಿತಿ ಬದಲಾಗಿದೆ. ಗಾಂಧಿ ಕುಟುಂಬದ ಅಖಾಡವಾಗಿದ್ದ ಕ್ಷೇತ್ರಗಳಲ್ಲಿ ಈಗ ಸ್ಪರ್ಧೆಗೆ ಕೊಂಚ ಯೋಚಿಸುವಂತಾಗಿದೆ.
ಅದರಲ್ಲೂ 2019 ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ರಾಹುಲ್ ಗಾಂಧಿ ಅವರೇ ಅಮೇಠಿಯಲ್ಲಿ ಸೋಲು ಕಂಡರು. ಇದು ಪಕ್ಷಕ್ಕೆ ಭಾರಿ ಮುಖಭಂಗ ತಂದಿತ್ತು. ಬಳಿಕ ಅವರು ಕೇರಳದ ವಯನಾಡಿನಿಂದ ಸ್ಪರ್ಧಿಸಿ ಸಂಸದರಾಗಿದ್ದಾರೆ. ರಾಯ್‌ಬರೇಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಸೋನಿಯಾ ಗಾಂಧಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಈ ಎರಡೂ ಕ್ಷೇತ್ರಗಳು ಸದ್ಯಕ್ಕೆ ಖಾಲಿ ಉಳಿದಿವೆ.
ಪಕ್ಷದ ನೆಲೆಯಾಗಿರುವ ಕ್ಷೇತ್ರಗಳಲ್ಲೇ ಅಭ್ಯರ್ಥಿಗಳನ್ನು ಘೋಷಣೆ ಮಾಡದಿರುವುದು ಇರುಸುಮುರುಸು ತಂದಿದೆ. ಹೀಗಾಗಿ ಇಂದು (ಶನಿವಾರ) ನಡೆಯುವ ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿ(ಸಿಇಸಿ) ಸಭೆಯಲ್ಲಿ ಯಾರನ್ನು ಅಭ್ಯರ್ಥಿಗಳನ್ನಾಗಿ ಘೋಷಿಸಬೇಕು ಎಂಬ ಚರ್ಚೆ ನಡೆಯಲಿದೆ. ಸಭೆಗೆ ಉತ್ತರಪ್ರದೇಶದ ಉಸ್ತುವಾರಿ ಅವಿನಾಶ್ ಪಾಂಡೆ ಅವರಿಗೂ ಆಹ್ವಾನ ನೀಡಲಾಗಿದೆ.
ಗಾಂಧಿ ಕುಟುಂಬದಿಂದಲೇ ಸ್ಪರ್ಧೆಗೆ ಒತ್ತಡ:ಪಕ್ಷದ ಮೂಲಗಳ ಪ್ರಕಾರ, ರಾಯ್‌ಬರೇಲಿ ಮತ್ತು ಅಮೇಠಿ ಕ್ಷೇತ್ರಗಳಿಗೆ ಗಾಂಧಿ ಕುಟುಂಬವನ್ನೇ ಸ್ಪರ್ಧೆಗೆ ಇಳಿಸಬೇಕು ಎಂದು ರಾಜ್ಯ ನಾಯಕರು ಸಿಇಸಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ, ಈ ಬಗ್ಗೆ ಸಿಇಸಿ ಮತ್ತು ಪಕ್ಷದ ಹೈಕಮಾಂಡ್ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ಎರಡೂ ಕ್ಷೇತ್ರ ಹೊರತಾಗಿ ರಾಜ್ಯದ ಬೇರೆಲ್ಲಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಖೈರು ಮಾಡಲಾಗಿದೆ.