ನವದೆಹಲಿ:ಹರಿಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ತನ್ನ ಮಿತ್ರಪಕ್ಷಗಳನ್ನೇ ನುಂಗುವ ಪರಾವಲಂಬಿ ಪಕ್ಷ ಎಂದು ಮೋದಿ ಟೀಕಿಸಿದ್ದಾರೆ.
ಹರಿಯಾಣ ವಿಧಾನಸಭಾ ಚುನಾವಣೆ ಗೆಲುವಿನ ಹಿನ್ನೆಯಲ್ಲಿ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. "ಕಾಂಗ್ರೆಸ್ ತನ್ನ ಮಿತ್ರಪಕ್ಷಗಳನ್ನು ನುಂಗುವ ಪರಾವಲಂಬಿ ಪಕ್ಷವಾಗಿದೆ. ಜನರು ತಮ್ಮದೇ ಪರಂಪರೆಯನ್ನು ದ್ವೇಷಿಸುವ, ದೇಶದ ಜನತೆ ಹೆಮ್ಮೆಪಡುವ ಎಲ್ಲವನ್ನೂ ಸೇರಿದಂತೆ, ರಾಷ್ಟ್ರೀಯ ಸಂಸ್ಥೆಗಳನ್ನು ಅನುಮಾನಿಸುವ ಮತ್ತು ಪ್ರತಿಷ್ಠೆಗೆ ಕಳಂಕ ತರುವ ದೇಶವನ್ನು ನಿರ್ಮಿಸಲು ಕಾಂಗ್ರೆಸ್ ಬಯಸುತ್ತದೆ. ದೇಶದ ಚುನಾವಣಾ ಆಯೋಗ, ದೇಶದ ಪೊಲೀಸ್, ದೇಶದ ನ್ಯಾಯಾಂಗವೇ ಸೇರಿದಂತೆ ಪ್ರತಿಯೊಂದು ಸಂಸ್ಥೆಗೂ ಕಳಂಕ ತರಲು ಕಾಂಗ್ರೆಸ್ ಇಷ್ಟಪಡುತ್ತದೆ'' ಎಂದು ಮೋದಿ ಆರೋಪಿಸಿದ್ದಾರೆ.
ಹರಿಯಾಣ ಚುನಾವಣಾ ಫಲಿತಾಂಶವನ್ನು ಕಾಂಗ್ರೆಸ್ ಒಪ್ಪಿಕೊಳ್ಳುತ್ತಿಲ್ಲ ಎಂದ ಪ್ರಧಾನಿ ಮೋದಿ, ಜಮ್ಮು ಮತ್ತು ಕಾಶ್ಮೀರದಲ್ಲಿನ ಫಲಿತಾಂಶದ ಕುರಿತಂತೆಯೂ ಮೋದಿ ಕಾಂಗ್ರೆಸ್ ವಿರುದ್ಧ 'ಪರಾವಲಂಬಿ' ಎಂದು ವ್ಯಂಗ್ಯವಾಡಿದರು. "ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಕಾಂಗ್ರೆಸ್ನ ಮಿತ್ರಪಕ್ಷಗಳು ಈಗಾಗಲೇ ಅದರಿಂದ ನಷ್ಟ ಹೊಂದುವ ಬಗ್ಗೆ ಚಿಂತಿತರಾಗಿದ್ದರು ಹಾಗೂ ಫಲಿತಾಂಶವೂ ಅದನ್ನೇ ಸಾಬೀತು ಮಾಡಿದೆ. ಲೋಕಸಭೆಯಲ್ಲಿಯೂ ಕಾಂಗ್ರೆಸ್ ಗೆದ್ದಿರುವ ಅರ್ಧದಷ್ಟು ಸ್ಥಾನಗಳು ಅದರ ಮಿತ್ರಪಕ್ಷಗಳಿಂದಾಗಿದೆ. ಮಿತ್ರಪಕ್ಷಗಳು ಕಾಂಗ್ರೆಸ್ನ್ನು ನಂಬಿದ ಅನೇಕ ರಾಜ್ಯಗಳಲ್ಲಿ ಅದರ ಕಳಪೆ ಪ್ರದರ್ಶನದ ಭಾರ ಹೊರಬೇಕಾಯಿತು'' ಎಂದು ಮೋದಿ ಟೀಕಾಪ್ರಹಾರ ನಡೆಸಿದರು.
ಕಾಂಗ್ರೆಸ್ ದೇಶದ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಿದೆ ಎಂದು ಆರೋಪಿಸಿದ ಪ್ರಧಾನಿ, ''ಲೋಕಸಭಾ ಚುನಾವಣೆಯ ಫಲಿತಾಂಶಕ್ಕೂ ಮುನ್ನ ಕಾಂಗ್ರೆಸ್ನವರು ಸೃಷ್ಟಿಸಿದ ಗಲಾಟೆ ನಿಮಗೆ ನೆನಪಿರಬಹುದು. ಚುನಾವಣೆ ಸಮಯದಲ್ಲೂ, ಪಕ್ಷದ ನಾಯಕರು ಹಾಗೂ ಅವರ ನಗರ ನಕ್ಸಲೀಯ ಮಿತ್ರರು ಚುನಾವಣಾ ಆಯೋಗದ ವರ್ಚಸ್ಸಿಗೆ ಕಳಂಕ ತರಲು ಸುಪ್ರೀಂ ಕೋರ್ಟ್‌ಗೆ ಹೋಗಿದ್ದರು. ಇದೆಲ್ಲದರ ಮೂಲಕ ಕಾಂಗ್ರೆಸ್ ದೇಶದ ಜನರ ದಾರಿತಪ್ಪಿಸಲು ಪ್ರಯತ್ನಿಸುತ್ತಿದೆ. ಇದು ಕಾಂಗ್ರೆಸ್ನಲ್ಲಿ ನಾಚಿಕೆಯಿಲ್ಲದೆ ನಡೆದುಕೊಂಡು ಬಂದಿದೆ'' ಎಂದು ಹೇಳಿದರು.