ನವದೆಹಲಿ: ಬಿಹಾರದಲ್ಲಿನ ರಾಜಕೀಯ ಪರಿಸ್ಥಿತಿಯ ಹಿನ್ನೆಲೆ ಕಾಂಗ್ರೆಸ್ "ಕಾದು ನೋಡುವ " ತಂತ್ರವನ್ನು ಅನುಸರಿಸುತ್ತಿದೆ. ಜೆಡಿಯು ಅಧ್ಯಕ್ಷ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಆಡಳಿತಾರೂಢ ಮೈತ್ರಿಕೂಟದಿಂದ ಹೊರನಡೆಯಲು ಮುಂದಾದರೆ, ಕಾಂಗ್ರೆಸ್ ಪಕ್ಷವು ವಿಧಾನಸಭೆಯಲ್ಲಿ ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಅಗತ್ಯ ತಯಾರಿ ನಡೆಸಲಿದೆ ಎಂಬುದು ತಿಳಿದು ಬಂದಿದೆ.
ಕಾಂಗ್ರೆಸ್ ಪಕ್ಷದ ಒಳಗಿನವರ ಪ್ರಕಾರ, ಬಿಹಾರದ ಎಐಸಿಸಿ ಉಸ್ತುವಾರಿ ಮೋಹನ್ ಪ್ರಕಾಶ್ ರಾಜ್ಯ ನಾಯಕರಿಂದ ಪ್ರತಿಕ್ರಿಯೆ ಪಡೆದುಕೊಂಡಿದ್ದಾರೆ. ಪರಿಸ್ಥಿತಿ ಬಗ್ಗೆ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಮುಖ್ಯಸ್ಥ ರಾಹುಲ್ ಗಾಂಧಿ ಅವರಿಗೆ ವಿವರಿಸಿದ್ದಾರೆ ಎಂಬುದು ತಿಳಿದು ಬಂದಿದೆ.
ಭಾರತ್ ಜೋಡೋ ನ್ಯಾಯ್ ಯಾತ್ರೆಯು ಬುಧವಾರ ಪಶ್ಚಿಮ ಬಂಗಾಳಕ್ಕೆ ಪ್ರವೇಶಿಸಿದ ನಂತರ ಜನವರಿ 25 ರಂದು ರಾತ್ರಿ ರಾಹುಲ್ಗಾಂಧಿ ದೆಹಲಿಗೆ ಮರಳಿದ್ದಾರೆ. ಗಣರಾಜ್ಯೋತ್ಸವದ ಕಾರಣದಿಂದ ವಿರಾಮ ತೆಗೆದುಕೊಂಡಿರುವ ಅವರು, ಜನವರಿ 28 ರಂದು ಮತ್ತೆ ಯಾತ್ರೆ ಪುನಾರಂಭಗೊಳಿಸಲಿದ್ದಾರೆ.
ನಾವೆಲ್ಲರೂ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದೇವೆ. ನಿತೀಶ್ ಕುಮಾರ್ ಮೈತ್ರಿಯಿಂದ ಹೊರ ಬರಬಹುದು ಎಂಬ ಊಹಾಪೋಹಗಳು ಹೆಚ್ಚಾಗಿವೆ. ಈ ಹಂತದಲ್ಲಿ ನಾನು ಆ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ಯಾವುದೇ ಬೆಳವಣಿಗೆ ನಡೆದರೆ ನಾವು ಪ್ರತಿಕ್ರಿಯಿಸುತ್ತೇವೆ ಎಂದು ಬಿಹಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಶಕೀಲ್ ಅಹ್ಮದ್ ಖಾನ್ ತಿಳಿಸಿದ್ದಾರೆ.