ಕೊಚ್ಚಿ (ಕೇರಳ) :ದೇಶದ ಆರ್ಥಿಕತೆಗೆ ಪುನರುಜ್ಜೀವನ ನೀಡಿದ, 10 ವರ್ಷ ಆಡಳಿತದ ಚುಕ್ಕಾಣಿ ಹಿಡಿದಿದ್ದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನಕ್ಕೆ ಇಡೀ ದೇಶವೇ ದುಃಖತಪ್ತವಾಗಿದೆ. ಇಂತಹ ಸಂತಾಪದ ವೇಳೆ ಕೇರಳ ಸಿಎಂ ಪಿಣರಾಯಿ ವಿಜಯನ್ ಪಂಚತಾರಾ ಹೋಟೆಲ್ ಉದ್ಘಾಟಿಸಿ ಟೀಕೆಗೆ ಗುರಿಯಾಗಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನಕ್ಕೆ ರಾಷ್ಟ್ರವು ಶೋಕಿಸುತ್ತಿರುವಾಗ ಕೇರಳದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ನಡೆದ ಅಧಿಕೃತ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿಸಿದ್ದನ್ನು ಕಾಂಗ್ರೆಸ್ ಪಕ್ಷವು ಟೀಕಿಸಿದೆ.
ಮಾಜಿ ಪ್ರಧಾನಿ ಸಿಎಂ ಅಗೌರವ:ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಈ ನಡೆಯು ಮಾಜಿ ಪ್ರಧಾನಿಗೆ ತೋರಿದ ಅಗೌರವ ಮತ್ತು ಅನುಚಿತ ವರ್ತನೆ ಎಂದು ಕಿಡಿಕಾರಿದ್ದಾರೆ.
ಹತ್ತು ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ದಿಲ್ಲಿಯಲ್ಲಿ ನಡೆಯುತ್ತಿರುವಾಗ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ನಿರ್ಮಿಸಲಾದ ಪಂಚತಾರಾ ಹೋಟೆಲ್ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿಎಂ ಹಾಜರಾಗುವುದು ಮತ್ತು ಉದ್ಘಾಟಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.