ಕರ್ನಾಟಕ

karnataka

ETV Bharat / bharat

ಸರ್ಕಾರಿ ಕೆಲಸಕ್ಕೆ ಅಡ್ಡಿ: ಪೂಜಾ ಖೇಡ್ಕರ್ ತಂದೆ ವಿರುದ್ಧ ದೂರು ದಾಖಲು - Puja Khedkar Father Case - PUJA KHEDKAR FATHER CASE

ತಹಶೀಲ್ದಾರ್ ದೀಪಕ್ ಅಕ್ಡೆ ಎಂಬುವರು ಆಗಸ್ಟ್ 7 ರಂದು ನೀಡಿದ ದೂರಿನ ಹಿನ್ನೆಲೆ ಮಾಜಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ತಂದೆ ವಿರುದ್ಧ ಬಂಡ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದ್ದು, ಪೊಲೀಸರು ತನಿಖೆ ಕೂಡ ಆರಂಭಿಸಿದ್ದಾರೆ.

Complaint Filed Against Puja Khedkar's Father For Obstructing Government Work
ಪೂಜಾ ಖೇಡ್ಕರ್ (ANI)

By ETV Bharat Karnataka Team

Published : Aug 9, 2024, 1:23 PM IST

ಪುಣೆ (ಮಹಾರಾಷ್ಟ್ರ) :ಮಾಜಿ ಐಎಎಸ್ ಪ್ರೊಬೇಷನರ್ ಪೂಜಾ ಖೇಡ್ಕರ್ ಅವರ ತಂದೆ ದಿಲೀಪ್ ಖೇಡ್ಕರ್ ಅವರು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಅವರ ವಿರುದ್ಧ ಇಲ್ಲಿನ ಬಂಡ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದಿಲೀಪ್ ಖೇಡ್ಕರ್ ಅವರು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಆಗಸ್ಟ್ 7 ರ ಬುಧವಾರದಂದು ತಹಶೀಲ್ದಾರ್ ದೀಪಕ್ ಅಕ್ಡೆ ಎಂಬುವರು ದೂರು ನೀಡಿದ್ದರು. ಇವರು ನೀಡಿದ ದೂರು ಹಿನ್ನೆಲೆ ದಿಲೀಪ್ ಅವರ ವಿರುದ್ಧ ಎಫ್​ಐಆರ್​ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೂಡ ಆರಂಭಿಸಿದ್ದಾರೆ. ಮುಳಶಿಯಲ್ಲಿ ರೈತರೊಬ್ಬರಿಗೆ ಪಿಸ್ತೂಲ್​ ತೋರಿಸಿ ಬೆದರಿಸಿದ ಆರೋಪದ ಹಿನ್ನೆಲೆಯಲ್ಲಿ ಪೂಜಾ ಅವರ ತಾಯಿ ಮನೋರಮಾ ಅವರನ್ನು ಇತ್ತೀಚೆಗೆಷ್ಟೇ ಬಂಧಿಸಲಾಗಿತ್ತು. ಈ ಪ್ರಕರಣದ ಬೆನ್ನಲ್ಲೇ ದಿಲೀಪ್ ಖೇಡ್ಕರ್ ಅವರಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ.

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಹಲವು ಅವಕಾಶಗಳನ್ನು ಬಳಸಿಕೊಂಡು ಹೇಗೋ ಪಾಸ್ ಆಗಿ, ತರಬೇತಿ ಬಳಿಕ ಪುಣೆಯಲ್ಲಿ ಕಲೆಕ್ಟರೇಟ್‌ ಆಗಿ ನಿಯೋಜನೆಗೊಂಡಿದ್ದ ಪೂಜಾ ಖೇಡ್ಕರ್, ತಮ್ಮ ಐಷಾರಾಮಿ ಕಾರಿಗೆ ಅನಧಿಕೃತವಾಗಿ ಕೆಂಪು ದೀಪ ಅಳವಡಿಕೆ ಮಾಡಿಕೊಂಡಿದ್ದರು. ಅಲ್ಲದೇ 'ಮಹಾರಾಷ್ಟ್ರ ಸರ್ಕಾರ' ಎಂದು ಫಲಕ ಕೂಡ ಹಾಕಿಕೊಂಡಿದ್ದರು. ತರಬೇತಿ ಅವಧಿಯಲ್ಲಿಯೇ ತಮ್ಮ ಹೆಸರಿಗೆ ಲೆಡರ್‌ಹೆಡ್, ತಮಗೊಂದು ಪ್ರತ್ಯೇಕ ಚೇಂಬರ್ ಹಾಗೂ ಕೈ ಕೆಳಗೆ ಒಂದಷ್ಟು ಸಿಬ್ಬಂದಿ ಜೊತೆಗೆ ಹಲವು ವಿಶೇಷ ಸವಲತ್ತುಗಳನ್ನು ನೀಡುವಂತೆ ಜಿಲ್ಲಾಧಿಕಾರಿ ಕಚೇರಿಗೆ ಪತ್ರ ಕೂಡ ಬರೆದಿದ್ದರು. ಪ್ರೊಬೇಷನರಿ ಅಧಿಕಾರಿಗಳಿಗೆ ಇಲ್ಲದ ವಿಶೇಷ ಸವಲತ್ತುಗಳನ್ನು ಅವರು ಬಳಸಿಕೊಳ್ಳುತ್ತಿರುವುದು ಚರ್ಚೆಗೆ ಗ್ರಾಸವಾಗಿತ್ತು. ಇದು ನಿಯಮ ಬಾಹಿರ ಎಂದು ಕೆಂಪು ದೀಪದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿತ್ತು.

ಉದ್ಯೋಗಕ್ಕೆ ಸೇರಿ ಒಂದು ವರ್ಷಗೊಳಗೇ ಮಹಿಳಾ ಟ್ರೈನಿ ಐಎಎಸ್ ಅಧಿಕಾರಿಯೊಬ್ಬರ ಅತಿರೇಕ ಕಂಡು ಹಿರಿಯ ಅಧಿಕಾರಿಗಳೇ ಕಂಗಾಲಾಗಿದ್ದರು. ಕಾಟ ತಾಳಲಾರದೇ ಮಹಾರಾಷ್ಟ್ರ ಸರ್ಕಾರ ಅವರನ್ನು ಪುಣೆಯಿಂದ ವಾಶಿಮ್ ಜಿಲ್ಲೆಗೆ ವರ್ಗಾವಣೆ ಕೂಡ ಮಾಡಿತ್ತು. ಬಳಿಕ ಮಾಹಿತಿ ಹಕ್ಕು ಕಾರ್ಯಕರ್ತರು ಈಕೆಯ ಹಿನ್ನೆಲೆ ಜಾಲಾಡಿದಾಗ ಅಕ್ರಮ ಕೋಟಾ ಬಳಕೆ ಸೇರಿದಂತೆ ಹಲವು ಆರೋಪಗಳು ಕೇಳಿ ಬಂದಿದ್ದವು. ಅವರ ಮೇಲೆ ಕೇಳಿ ಬಂದ ಆರೋಪಗಳನ್ನು ಪರಿಶೀಲಿಸಿದಾಗ ಅವರ ವಿರುದ್ಧದ ಅಕ್ರಮ ಚಟುವಟಿಕೆ ಆರೋಪ ಸಾಬೀತಾಗಿತ್ತು. ಇದರ ಬೆನ್ನಲ್ಲೇ ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್‌ಸಿ) ಐಎಎಸ್ ಹುದ್ದೆಗೆ ಅವರ ಆಯ್ಕೆಯನ್ನೇ ರದ್ದು ಮಾಡಿದ್ದಲ್ಲದೇ ಭವಿಷ್ಯದಲ್ಲಿ ಇನ್ನೆಂದೂ ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳುವಂತಿಲ್ಲ ಎಂಬ ನಿರ್ಬಂಧ ಹೇರಿದೆ. ಆಯೋಗದ ಈ ನಿರ್ಧಾರ ಪ್ರಶ್ನಿಸಿ ಬುಧವಾರ(ಆ.​​7) ಅವರು ಕೋರ್ಟ್​​ ಮೊರೆ ಹೋಗಿದ್ದಾರೆ.

ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಗುರುವಾರ (ಆ 8) ದೆಹಲಿ ಹೈಕೋರ್ಟ್ ಮೆಟ್ಟಿಲು ಹತ್ತಿದ ಅವರು, ಬಂಧನ ಪೂರ್ವ ಜಾಮೀನು ಕೋರಿ ಸಲ್ಲಿಸಲಾಗಿರುವ ಅವರ ಮನವಿಯನ್ನು ಶುಕ್ರವಾರ (ಆ. 9) ರಂದು ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ಅವರ ಮುಂದೆ ವಿಚಾರಣೆಗೆ ನಿಗದಿಪಡಿಸಲಾಗಿದೆ.

'ಈ ಹುದ್ದೆಯನ್ನು ತಾತ್ಕಾಲಿಕವಾಗಿ ತೆಗೆದಿದ್ದರೂ ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು, ಖೇಡ್ಕರ್ ಅವರಿಗೆ ಸಹಾಯ ಮಾಡಿದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು, ಈ ಬಗ್ಗೆ ಮೂಲ ತನಿಖೆ ನಡೆಸಬೇಕು' ಎಂದು ಸಾಮಾಜಿಕ ಕಾರ್ಯಕರ್ತ ವಿಜಯ್ ಕುಮಾರ್ ಅವರು ಪ್ರಕರಣವನ್ನು ನ್ಯಾಯಾಲಯದ ಮುಂದಿಟ್ಟಿದ್ದಾರೆ.

ಇದನ್ನೂ ಓದಿ:ವಿವಾದಿತ ಟ್ರೇನಿ ಐಎಎಸ್​ ಅಧಿಕಾರಿ ಪೂಜಾ ಖೇಡ್ಕರ್​ 'ಎಲ್ಲ ಸರ್ಕಾರಿ ಹುದ್ದೆಗಳಿಂದ ಶಾಶ್ವತ ನಿಷೇಧ' - PROBATIONARY IAS PUJA KHEDKAR

ABOUT THE AUTHOR

...view details