ಬೆಂಗಳೂರು: ಸಾರ್ವಜನಿಕರು ತಮ್ಮ ಕುಂದುಕೊರತೆ ಬಗೆಹರಿಸಲು ಕೋರಿ ಸಲ್ಲಿಸಿದ್ದ ಮನವಿಯನ್ನು ಸೂಕ್ತ ರೀತಿಯಲ್ಲಿ ನಿರ್ಧಾರ ತೆಗೆದುಕೊಳ್ಳದ ಸರ್ಕಾರದ ಕ್ರಮದ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿರುವ ಹೈಕೋರ್ಟ್, 'ನಮ್ಮದು ಕಲ್ಯಾಣ ರಾಜ್ಯವಾಗಿದ್ದು, ಈಸ್ಟ್ ಇಂಡಿಯಾ ಕಂಪನಿಯಲ್ಲ' ಎಂದು ಖಾರವಾಗಿ ನುಡಿದು ಬಿಸಿ ಮುಟ್ಟಿಸಿದೆ.
ಬಳ್ಳಾರಿ ನಗರಸಭೆ ವಾರ್ಡ್ ನಂ.34ರ ವ್ಯಾಪ್ತಿಯಲ್ಲಿ ಉದ್ದೇಶಿತ ರೈಲ್ವೆ ಮೇಲ್ಸೇತುವೆ ಯೋಜನೆಯ ಬದಲಿಗೆ ಪರ್ಯಾಯ ಯೋಜನೆ ಕುರಿತಂತೆ ಹೈಕೋರ್ಟ್ಗೆ ಸಿ.ಕೆ.ಮೊಯಿನುದ್ದೀನ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಬಳ್ಳಾರಿಯ ಕಂಟೊನ್ಮೆಂಟ್ ಪ್ರದೇಶದ ಹಳೆ ಮಸೀದಿ ಹಿಂಭಾಗದ ತಿಲಕ್ ನಗರ ರಸ್ತೆಯ 'ರಹೀಮ್‌ಬಾದ್ ಕಾಲೊನಿ ನಿವಾಸಿಗಳ ಸಂಘ'ದ ಕಾರ್ಯದರ್ಶಿ ಆಗಿರುವ ಮೊಯಿನುದ್ದೀನ್, ಈ ಪರ್ಯಾಯ ಯೋಜನೆ ಅನುಸರಿಸಲು ತಾವು ಸಲ್ಲಿಸಿರುವ ಮನವಿ ಪತ್ರ ಪರಿಗಣಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠದ ಮುಂದೆ ಈ ಅರ್ಜಿ ವಿಚಾರಣೆಗೆ ಬಂದಿದೆ. ಇದರ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಸ್.ಸುನಿಲ್ ಕುಮಾರ್, ಉದ್ದೇಶಿತ ರೈಲ್ವೆ ಮೇಲ್ಸೆತುವೆ ನಿರ್ಮಾಣದಿಂದ ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸಲಿದ್ದಾರೆ. ಆದ್ದರಿಂದ, ಈಗಾಗಲೇ ರೂಪಿಸಲಾಗಿರುವ ಪರ್ಯಾಯ ಮಾರ್ಗಗಳಲ್ಲಿ ಯಾವುದಾದರೂ ಒಂದನ್ನು ಅಳವಡಿಸಿಕೊಳ್ಳುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರಾಧಿಕಾರಗಳಿಗೆ ಮನವಿ ಸಲ್ಲಿಸಲಾಗಿತ್ತು. ತಮ್ಮ ಮನವಿಯನ್ನು ಪ್ರಾಧಿಕಾರಗಳು ಪರಿಗಣಿಸಿಲ್ಲ ಎಂದು ನ್ಯಾಯ ಪೀಠಕ್ಕೆ ವಿವರಿಸಿದರು.