ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಮರುಸ್ಥಾಪನೆ ಒತ್ತಾಯದ ನಿರ್ಣಯುದೊಂದಿಗೆ ಕಣಿವೆ ರಾಜ್ಯದ ನೂತನ ಮುಖ್ಯಮಂತ್ರಿ ಆಗಿರುವ ಒಮರ್ ಅಬ್ಧುಲ್ಲಾ ನವದೆಹಲಿಗೆ ಪ್ರಯಾಣಿಸಿದ್ದಾರೆ.
ಶ್ರೀನಗರದ ಸಿವಿಲ್ ಸೆಕ್ರೆಟರಿಯೇಟ್ನಲ್ಲಿ ಒಮರ್ ಅಬ್ದುಲ್ಲಾ ನೇತೃತ್ವದಲ್ಲಿ ಐದು ಸಚಿವರೊಂದಿಗೆ ನಡೆದ ಮಧ್ಯಂತರ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ರಾಜ್ಯ ಸ್ಥಾನಮಾನ ನೀಡಬೇಕು ಎಂಬ ಕುರಿತು, ಸಂಪುಟ ನಿರ್ಣಯ ಅಂಗೀಕರಿಸಲಾಗಿದೆ. ಈ ಸಂಬಂಧ ಕರಡನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಮೂಲಗಳು ಈಟಿವಿ ಭಾರತ್ಗೆ ದೃಢಪಡಿಸಿವೆ. ರಾಜ್ಯ ಸ್ಥಾನಮಾನ ಮರುಸ್ಥಾಪನೆ ಕುರಿತ ನಿರ್ಣಯಕ್ಕೆ ಎಲ್ಲ ಸಚಿವರು ಅವಿರೋಧವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕ್ಯಾಬಿನೆಟ್ ಸಭೆ ಬಗ್ಗೆ ಇಲ್ಲ ಅಧಿಕೃತ ಮಾಹಿತಿ:ಕ್ಯಾಬಿನೆಟ್ ಸಭೆಯ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳು ಹೊರಬಿದ್ದಿಲ್ಲ. ನಂತರದ ದಿನಗಳಲ್ಲಿ ಈ ಕುರಿತು ಅಧಿಕೃತ ಮಾಹಿತಿ ಹೊರ ಬೀಳಬಹುದು ಎಂದು ಮತ್ತೊಂದು ಮೂಲಗಳು ತಿಳಿಸಿವೆ.
ಅಕ್ಟೋಬರ್ 16ರಂದು ಐದು ಜನ ಸಚಿವರೊಂದಿಗೆ ಅಬ್ದುಲ್ಲಾ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ, ತಮ್ಮ ಸರ್ಕಾರ ರಚನೆ ಮಾಡಿದ್ದಾರೆ. 2019ರಲ್ಲಿ ರಾಜ್ಯಕ್ಕೆ ಇದ್ದ ವಿಶೇಷ ಸ್ಥಾನಮಾನದ ವಿಧಿ ರದ್ದುಗೊಳಿಸಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಮಾಡಲಾಗಿತ್ತು. ಇದೀಗ ಮತ್ತೆ ರಾಜ್ಯಕ್ಕೆ ರಾಜ್ಯದ ಸ್ಥಾನಮಾನ ತರುವುದು ಅಬ್ಧುಲ್ಲಾ ಸರ್ಕಾರದ ಪ್ರಮುಖ ಉದ್ದೇಶವಾಗಿದೆ.
ಮುಂದಿನ ಕೆಲವು ದಿನಗಳಲ್ಲಿ ಮುಖ್ಯಮಂತ್ರಿ ಒಮರ್ ಅಬ್ಧುಲ್ಲಾ, ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಇತರ ವಿಚಾರಗಳ ಜೊತೆ ನಿರ್ಣಯದ ವಿಚಾರವನ್ನು ಪ್ರಸ್ತಾಪಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಜಮ್ಮು ಮತ್ತು ಕಾಶ್ಮೀರದ ಸಿಎಂ ಅಬ್ಧುಲ್ಲಾ ನಡೆಸುತ್ತಿರುವ ಮೊದಲ ಔಪಚಾರಿಕ ಸಭೆ ಇದಾಗಿದೆ. 2019 ರ ಆಗಸ್ಟ್ನಲ್ಲಿ 370 ವಿಧಿಗೆ ಮುನ್ನ ತಮ್ಮ ತಂದೆ ಹಾಗೂ ಮಾಜಿ ಸಂಸದರಾಗಿದ್ದ ಫಾರೂಕ್ ಅಬ್ದುಲ್ಲಾ ಮತ್ತು ಹಸ್ನೈನ್ ಮಸೂದಿ ಅವರ ಜೊತೆಗೆ ಅವರು ಪ್ರಧಾನಿ ಭೇಟಿಯಾಗಿದ್ದರು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯತ್ವ ಮರುಸ್ಥಾಪಿಸುವುದಾಗಿ ಭರವಸೆ ನೀಡಿರುವುದರಿಂದ ಈ ಸಭೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಈ ಹಿಂದೆ, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಇಬ್ಬರೂ ಕಾಲಮಿತಿಯ ಗಡುವಿನಲ್ಲಿ ರಾಜ್ಯ ಸ್ಥಾನಮಾನ ಮರುಸ್ಥಾಪಿಸುವ ಭರವಸೆ ನೀಡಿದ್ದರು.
ರಾಜ್ಯ ಸ್ಥಾನಮಾನ ಮರಳಿಸುವ ಕುರಿತು ಪ್ರಣಾಳಿಕೆಯನ್ನು ಎನ್ಸಿ ನೀಡಿದ್ದ ಭರವಸೆ ಬಗ್ಗೆ ವಿಪಕ್ಷಗಳು ಕೂಡ ಬಹಳ ಎಚ್ಚರಿಕೆ ಗಮನವನ್ನು ಹೊಂದಿವೆ. ಜಮ್ಮು ಮತ್ತು ಕಾಶ್ಮೀರಕ್ಕೆ ಮತ್ತೆ ರಾಜ್ಯ ಸ್ಥಾನಮಾನ ಪಡೆಯಲಿದೆ ಎಂಬ ಬಗ್ಗೆ ಒಮರ್ ಕೂಡ ಸಾಕಷ್ಟು ಆಶಾವಾದ ಹೊಂದಿದ್ದಾರೆ.
ಮತ್ತೊಂದು ಪ್ರಮುಖ ಅಂಶ ಎಂದರೆ ಸುಪ್ರೀಂ ಕೋರ್ಟ್ ಕೂಡ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನದ ಹಕ್ಕು ಮರಳಿ ಸ್ಥಾಪಿಸುವಂತೆ ಕೋರಿರುವ ಅರ್ಜಿ ಆಲಿಕೆಗೆ ಸಮ್ಮದಿ ಸೂಚಿಸಿದೆ. ಈ ಸಂಬಂಧ ಶಿಕ್ಷಣತಜ್ಞ ಜಾಹೂರ್ ಅಹ್ಮದ್ ಮತ್ತು ಖುರ್ಷಿದ್ ಮಲಿಕ್ ಅರ್ಜಿ ಸಲ್ಲಿಕೆ ಮಾಡಿದ್ದರು.
ಇದನ್ನೂ ಓದಿ: ಎನ್ಸಿ-ಕಾಂಗ್ರೆಸ್ ಸರ್ಕಾರದ 'ಏಕೈಕ ಹಿಂದು ಶಾಸಕ'ನಿಗೆ ಡಿಸಿಎಂ ಪಟ್ಟ: ಯಾರು ಈ ಸುರೀಂದರ್ ಚೌಧರಿ?