ಕೋಲ್ಕತ್ತಾ(ಪಶ್ಚಿಮ ಬಂಗಾಳ):ಪಶ್ಚಿಮ ಬಂಗಾಳದ ವೈದ್ಯೆ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವೈದ್ಯರು ಇಂದು (ಸೋಮವಾರ) ಮುಷ್ಕರ ನಡೆಸುತ್ತಿದ್ದಾರೆ. ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಪ್ರಕರಣವನ್ನು ವಹಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಕರಣವನ್ನು ಭಾನುವಾರದೊಳಗೆ ರಾಜ್ಯ ಪೊಲೀಸರು ಭೇದಿಸದೇ ಹೋದಲ್ಲಿ, ಸಿಬಿಐ ತನಿಖೆಗೆ ಹಸ್ತಾಂತರಿಸಲಾಗುವುದು ಎಂದಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಮಮತಾ ಬ್ಯಾನರ್ಜಿ, ಕೋಲ್ಕತ್ತಾ ಪೊಲೀಸ್ ಆಯುಕ್ತರೊಂದಿಗೆ ಮಾತುಕತೆ ನಡೆಸಿದ್ದೇನೆ. ಆರೋಪಿಗಳನ್ನು ಶೀಘ್ರವೇ ಬಂಧಿಸಿ, ತ್ವರಿತ ನ್ಯಾಯಾಲಯ ರಚಿಸಿ ತನಿಖೆ ನಡೆಸಬೇಕು. ಆಸ್ಪತ್ರೆಯೊಳಗೆ ವೈದ್ಯೆಯ ಮೇಲೆ ಅಮಾನುಷ ಕೃತ್ಯ ಹೇಗೆ ನಡೆಯಿತು ಎಂಬುದು ಅರ್ಥವಾಗುತ್ತಿಲ್ಲ. ಆರ್ಜಿ ಕರ್ ಆಸ್ಪತ್ರೆಯ ಪ್ರಾಂಶುಪಾಲರು ಈಗಾಗಲೇ ರಾಜೀನಾಮೆ ನೀಡಿದ್ದಾರೆ. ರಾಜ್ಯ ಪೊಲೀಸರಿಗೆ ಭಾನುವಾರ ಅಂತಿಮ ಗಡುವು ನೀಡಲಾಗಿದೆ. ಬಳಿಕ ಪ್ರಕರಣ ಸಿಬಿಐಗೆ ನೀಡಲಾಗುವುದು ಎಂದರು.
ವೈದ್ಯೆಯ ಮೇಲೆ ನಡೆದ ಅಮಾನುಷ ಕೃತ್ಯ ಖಂಡಿಸಿ ದೇಶಾದ್ಯಂತ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಫೆಡರೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ (ಫೋರ್ಡಾ) ಕರೆ ನೀಡಿದ ಪ್ರತಿಭಟನೆಗೆ ವೈದ್ಯರು ಆಸ್ಪತ್ರೆಗಳ ಹೊರಗೆ ಧರಣಿ ನಡೆಸುತ್ತಿದ್ದಾರೆ. ಪ್ರಕರಣವನ್ನು ಸಿಬಿಐಗೆ ವಹಿಸಬೇಕು, ತ್ವರಿತ ನ್ಯಾಯಾಲಯ ರಚನೆ ಮತ್ತು ಎಲ್ಲಾ ಆಸ್ಪತ್ರೆಗಳಲ್ಲಿ ಕೇಂದ್ರ ರಕ್ಷಣಾ ಕಾಯಿದೆ ಅನುಷ್ಠಾನಕ್ಕೆ ಸಮಿತಿ ರಚನೆ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.