ಕೋಲ್ಕತ್ತಾ(ಪಶ್ಚಿಮ ಬಂಗಾಳ):ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಮತ್ತು ಏಕರೂಪ ನಾಗರಿಕ ಸಂಹಿತೆ (ಯುಸಿಸಿ)ಯನ್ನು ಪಶ್ಚಿಮ ಬಂಗಾಳದಲ್ಲಿ ಅನುಷ್ಠಾನಕ್ಕೆ ನಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೊಮ್ಮೆ ಗುಡುಗಿದ್ದಾರೆ.
ಈದ್ ಉಲ್ ಫಿತರ್ ಹಿನ್ನೆಲೆಯಲ್ಲಿ ಕೋಲ್ಕತ್ತಾದಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಾವು ದೇಶಕ್ಕಾಗಿ ರಕ್ತ ಹರಿಸಲು ಸಿದ್ಧರಿದ್ದೇವೆ. ಆದರೆ ದೇಶಕ್ಕಾಗಿ ಶಾಂತಿ ಕದಡಲು ಬಿಡುವುದಿಲ್ಲ. ಹಿಂಸೆಯನ್ನು ಸಹಿಸುವುದಿಲ್ಲ. ಏಕರೂಪ ನಾಗರಿಕ ಸಂಹಿತೆ ಜಾರಿಯನ್ನು ಯಾವುದೇ ಕಾರಣಕ್ಕೂ ನಾವು ಒಪ್ಪಲ್ಲ. ಎಲ್ಲಾ ಧರ್ಮಗಳ ನಡುವೆ ಸಾಮರಸ್ಯವನ್ನು ಬಯಸುತ್ತೇನೆ. ಎಲ್ಲರ ಒಳಿತಿಗಾಗಿ ಎನ್‌ಆರ್‌ಸಿ, ಸಿಎಎ, ಯುಸಿಸಿಯನ್ನು ರಾಜ್ಯದಲ್ಲಿ ಜಾರಿಗೆ ತರಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ ಮಮತಾ, ಎಲ್ಲಾದರೂ ಸ್ಫೋಟ ಸಂಭವಿಸಿದಲ್ಲಿ ಅಲ್ಲಿಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಖಾ ದಳವನ್ನು ಕಳುಹಿಸುತ್ತದೆ. ನಿಮ್ಮೆಲ್ಲರನ್ನು ಬಂಧಿಸಲಾಗುತ್ತದೆ. ಹೀಗೆ ಎಲ್ಲರನ್ನೂ ಬಂಧಿಸಿದರೆ ಇಡೀ ದೇಶವೇ ಖಾಲಿಯಾಗುತ್ತದೆ. ನಾವು ಸರ್ವಧರ್ಮಗಳಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಣಲು ಬಯಸುತ್ತೇವೆ. ಸುಂದರ ಆಕಾಶ, ಕೂಡಿ ಬಾಳುವ ಸಮಾಜ ನಮ್ಮದಾಗಬೇಕು. ಯಾರಾದರೂ ಗಲಭೆಗೆ ಪ್ರಚೋದಿಸಿದಲ್ಲಿ ನೀವು ಸುಮ್ಮನಿರಿ ಎಂದು ಮುಸ್ಲಿಮರಿಗೆ ಸಲಹೆ ನೀಡಿದರು.