ವಾರಾಣಸಿ (ಉತ್ತರ ಪ್ರದೇಶ) :ಅಯೋಧ್ಯೆಯ ರಾಮ ಮಂದಿರ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯಲ್ಲಿ ಭಾಗಿಯಾಗಿದ್ದ ಮುಖ್ಯ ಅರ್ಚಕರಾದ ಆಚಾರ್ಯ ಲಕ್ಷ್ಮೀಕಾಂತ್ ದೀಕ್ಷಿತ್ ಅವರು ಇಂದು ನಿಧನರಾಗಿದ್ದಾರೆ. 86 ವರ್ಷದ ಅರ್ಚಕರ ಆರೋಗ್ಯವು ಕಳೆದ ಕೆಲವು ದಿನಗಳಿಂದ ಹದಗೆಟ್ಟಿತ್ತು. ಅವರ ಅಂತ್ಯಕ್ರಿಯೆಯನ್ನು ಮಣಿಕರ್ಣಿಕ ಘಾಟ್ನಲ್ಲಿ ನಡೆಸಲಾಗುವುದು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಅಯೋಧ್ಯೆ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಿತ್ತು. ಈ ಆಧ್ಯಾತ್ಮಿಕ ಸಮಾರಂಭದಲ್ಲಿ ವಾರಾಣಸಿಯ ಹಿರಿಯ ಆರ್ಚಕರಾಗಿದ್ದ ದೀಕ್ಷಿತ್ ಭಾಗಿಯಾಗಿದ್ದರು. ದೀಕ್ಷಿತ್ ಅವರು ಮಹಾರಾಷ್ಟ್ರದ ಸೋಲಾಪುರ್ ಜಿಲ್ಲೆಯ ಮೂಲದವರಾಗಿದ್ದು, ಅನೇಕ ಪೀಳಿಗೆಯಿಂದ ವಾರಾಣಸಿಯಲ್ಲಿ ನೆಲೆಸಿದ್ದರು.
ದೀಕ್ಷಿತ್ ಅವರ ನಿಧನಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಆಚಾರ್ಯ ಲಕ್ಷ್ಮೀಕಾಂತ್ ದೀಕ್ಷಿತ್ ಅವರು ಕಾಶಿಯ ದೊಡ್ಡ ಜ್ಞಾನಿಗಳಾಗಿದ್ದಾರೆ. ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಮುಖ್ಯ ಅರ್ಚಕರಾಗಿದ್ದವರು. ಅವರ ನಿಧನವು ಆಧ್ಯಾತ್ಮಿಕ ಮತ್ತು ಸಾಹಿತ್ಯಕ ಕ್ಷೇತ್ರಕ್ಕೆ ನಷ್ಟ ಉಂಟು ಮಾಡಿದೆ. ಭಾರತದ ಸಂಸ್ಕೃತಿ ಮತ್ತು ಸಂಸ್ಕೃತ ಭಾಷೆಗೆ ಅವರು ಸಲ್ಲಿಸಿರುವ ಸೇವೆಯಿಂದಾಗಿ ಅವರು ಚಿರಸ್ಮರಣೆಯಾಗಿರಲಿದ್ದಾರೆ ಎಂದಿದ್ದಾರೆ.