ರಾಂಚಿ (ಜಾರ್ಖಂಡ್):ತೀವ್ರ ಕುತೂಹಲ ಕೆರಳಿಸಿದ್ದ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ವಿಶ್ವಾಸಮತ ಗೆದ್ದಿದ್ದಾರೆ. ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಇಂದು ನಡೆದ ವಿಶ್ವಾಸಮತ ಯಾಚನೆಯಲ್ಲಿ ಸೊರೇನ್ ಸರ್ಕಾರವು ನಿರೀಕ್ಷೆಯಂತೆ ವಿಶ್ವಾಸಮತ ಪರೀಕ್ಷೆಯಲ್ಲಿ ಗೆಲುವು ಸಾಧಿಸಿದೆ.
ಸದನದಲ್ಲಿ ವಿಶ್ವಾಸಮತ ಯಾಚನೆಯ ಮೇಲಿನ ಚರ್ಚೆ ಬಳಿಕ ಮತದಾನ ನಡೆಯಿತು. ಮತದಾನದ ವೇಳೆಯೂ ನಿರಂತರ ಗದ್ದಲ ಉಂಟಾಯಿತು. ಕೋಲಾಹಲದ ನಡುವೆಯೇ ಮತ ಎಣಿಕೆ ಕಾರ್ಯ ನಡೆಯಿತು. ಇದೇ ವೇಳೆ ಎನ್‌ಡಿಎ ಶಾಸಕರು ಸದನದಿಂದ ಹೊರ ನಡೆದರು. ಇದರಿಂದಾಗಿ ಪ್ರಸ್ತಾಪದ ವಿರುದ್ಧ ಒಂದೇ ಒಂದು ಮತವೂ ಚಲಾವಣೆಯಾಗಲಿಲ್ಲ. ಸ್ವತಂತ್ರ ಶಾಸಕಿ ಸರಯೂ ರೈ ತಟಸ್ಥರಾಗಿದ್ದರು. ಮತದಾನದ ನಂತರ ವಿಧಾನಸಭೆಯ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.
ವಿಶ್ವಾಸಮತ ಗೆದ್ದ ಬಳಿಕ ಮಾತನಾಡಿದ ಸಿಎಂ ಹೇಮಂತ್ ಸೊರೇನ್, ರಾಜ್ಯದ ಜನತೆ ವಿರೋಧಿಗಳಿಗೆ (ಬಿಜೆಪಿ) ತಕ್ಕ ಪಾಠ ಕಲಿಸಲಿದ್ದಾರೆ. ಮುಂಬರುವ ಚುನಾವಣೆಯಲ್ಲಿಯೂ ತಕ್ಕ ಪಾಠ ಕಲಿಸಲಿದ್ದಾರೆ. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ದೇಶದ ಜನತೆ ಎಚ್ಚರಿಕೆ ನೀಡಿದ್ದಾರೆ. ಅವರಿಗೆ (ಬಿಜೆಪಿ) ಉತ್ತರ ನೀಡಲು ಸಮಯವಿದೆ. 2019 ರಿಂದ ನಾವು ಸಾಂವಿಧಾನಿಕ ಕಾರ್ಯವಿಧಾನಗಳನ್ನು ಅನುಸರಿಸುತ್ತಾ ಬಂದಿದ್ದೇವೆ. ಆಡಳಿತ ಪಕ್ಷದ ಶಕ್ತಿ ಮತ್ತು ಸಾಮರ್ಥ್ಯವನ್ನು ನೋಡಿದ್ದೀರಿ. ಅದಕ್ಕೆ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.
ಒಟ್ಟು 81 ಸಂಖ್ಯಾಬಲ ಹೊಂದಿರುವ ರಾಜ್ಯ ವಿಧಾನಸಭೆಯಲ್ಲಿ ಹೇಮಂತ್ ಸೊರೇನ್ ಅವರ ಪರವಾಗಿ 45 ಶಾಸಕರ ಮತಗಳೊಂದಿಗೆ ವಿಶ್ವಾಸ ಮತ ಗೆದ್ದರು. ಅವರು ಜುಲೈ 4 ರಂದು ರಾಂಚಿಯ ರಾಜಭವನದಲ್ಲಿ ಜಾರ್ಖಂಡ್‌ನ 13ನೇ ಮುಖ್ಯಮಂತ್ರಿಯಾಗಿ, ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದರು.