ನವದೆಹಲಿ: ಕೇಂದ್ರ ಸರ್ಕಾರವು ನೌಕರರಿಗೆ ಭರ್ಜರಿ ಶಿವರಾತ್ರಿ ಗಿಫ್ಟ್ ನೀಡಿದೆ. ತುಟ್ಟಿಭತ್ಯೆ (ಡಿಎ) ಮೂಲ ವೇತನದ ಶೇ 50ಕ್ಕೆ ಹೆಚ್ಚಿಸಿದ್ದು, ಅಂದರೆ ಪ್ರಸ್ತುತ ಇದ್ದ ಶೇ 46ರಷ್ಟು ಡಿಎ ಯನ್ನು ಶೇ 50ಕ್ಕೆ ಹೆಚ್ಚಿಸಿ, ಒಟ್ಟಾರೆ ಶೇ ನಾಲ್ಕರಷ್ಟು ಏರಿಕೆ ಮಾಡಲಾಗಿದೆ. ಈ ವರ್ಷದ ಜನವರಿ 1 ರಿಂದ ಜಾರಿಗೆ ಬರುವಂತೆ 1 ಕೋಟಿಗೂ ಹೆಚ್ಚು ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿ ಸುದ್ದಿ ನೀಡಿದೆ. ಚುನಾವಣೆಗೂ ಮುನ್ನ ಡಿಎ ಹೆಚ್ಚಿಸಿ ಸರ್ಕಾರಿ ನೌಕರರ ಮನವೊಲಿಸುವ ಕಸರತ್ತು ನಡೆಸಿದೆ.
ಜನವರಿ 1, 2024 ರಿಂದ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ (ಡಿಎ) ಮತ್ತು ಪಿಂಚಣಿದಾರರಿಗೆ ಡಿಆರ್‌ನೆಸ್ ರಿಲೀಫ್ (ಡಿಆರ್) ಅನ್ನು ಸಹ ಬಿಡುಗಡೆ ಮಾಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದು ಪ್ರಸ್ತುತ ಇರುವ ಶೇಕಡಾ 46 ರಿಂದ ಶೇ 50ಕ್ಕೆ ಏರಿಕೆಯಾಗಿದೆ. ಅಂದರೆ ಶೇ ನಾಲ್ಕರಷ್ಟು ಹೆಚ್ಚಳವನ್ನು ಮಾಡಲಾಗಿದೆ. ಬೆಲೆ ಏರಿಕೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಮೂಲ ವೇತನ/ಪಿಂಚಣಿ ಹೆಚ್ಚಳ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಸಂಪುಟ ಸಭೆಯ ನಂತರ ಹೇಳಿದ್ದಾರೆ.
ತುಟ್ಟಿಭತ್ಯೆ ಹೆಚ್ಚಳದಿಂದ ವಾರ್ಷಿಕ 12,869 ಕೋಟಿ ರೂ. ಹೊರೆ ಬೀಳಲಿದೆ. ಇದರ ಪರಿಣಾಮ 2024-25ರ ಅವಧಿಯಲ್ಲಿ (ಜನವರಿ 2024 ರಿಂದ ಫೆಬ್ರವರಿ 2025) 15,014 ಕೋಟಿ ರೂ. ಸರ್ಕಾರಕ್ಕೆ ಹೊರೆ ಆಗಲಿದೆ ಎಂದು ಅಂದಾಜಿಸಲಾಗಿದೆ.