ನವದೆಹಲಿ:ಅತಿಹೆಚ್ಚು ಜನ ಮತ್ತು ವಾಹನ ದಟ್ಟಣೆ ನಗರವಾಗಿ ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿ ಈ ಒತ್ತಡವನ್ನು ತಗ್ಗಿಸಲು ಅಗತ್ಯವಿರುವ ಬಹುನಿರೀಕ್ಷಿತ ಮೂರನೇ ಹಂತದ ಮೆಟ್ರೋ ರೈಲು ಕಾಮಗಾರಿಗೆ ಕೇಂದ್ರದ ನರೇಂದ್ರ ಮೋದಿ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ. 31 ನಿಲ್ದಾಣಗಳುಳ್ಳ 44.65 ಕಿಮೀ ಉದ್ದದ ಎರಡು ಎಲಿವೇಟೆಡ್ ಕಾರಿಡಾರ್‌ಗಳನ್ನು ಈ ಯೋಜನೆ ಹೊಂದಿದೆ.
15,611 ಕೋಟಿ ರೂಪಾಯಿ ಮೊತ್ತದ ಯೋಜನೆ ಇದಾಗಿದೆ. ಮೂರನೇ ಹಂತದ ಮೆಟ್ರೋ ರೈಲು ಯೋಜನೆ ಪೂರ್ಣಗೊಂಡ ಬಳಿಕ ಬೆಂಗಳೂರು ನಗರವು 220.20 ಕಿಮೀ ವ್ಯಾಪ್ತಿಯ ಮೆಟ್ರೋ ಜಾಲವನ್ನು ಹೊಂದಿದಂತಾಗುತ್ತದೆ. ಈ ಯೋಜನೆಯು 44.65 ಕಿಮೀ ಉದ್ದವನ್ನು ಹೊಂದಿದೆ. 2029ರ ವೇಳೆಗೆ ಕಾಮಗಾರಿ ಪೂರ್ಣಗೊಂಡು ಕಾರ್ಯಾರಂಭ ಮಾಡಲಿ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಮೂರನೇ ಹಂತದ ಸಂಪರ್ಕ ಜಾಲ:ಆರೆಂಜ್ ಲೈನ್ ಆಗಿರುವ ಮೆಟ್ರೋ ಮೂರನೇ ಹಂತವು ನಗರದ ದಕ್ಷಿಣ ಮತ್ತು ಪಶ್ಚಿಮ ಭಾಗವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದೊಂದಿಗೆ ಸಂಪರ್ಕಿಸುತ್ತದೆ. ಪೀಣ್ಯ ಕೈಗಾರಿಕಾ ಪ್ರದೇಶ, ಬನ್ನೇರುಘಟ್ಟ ರಸ್ತೆ, ಹೊರ ವರ್ತುಲ ರಸ್ತೆಯಲ್ಲಿನ ಐಟಿ ಕೈಗಾರಿಕೆಗಳು, ತುಮಕೂರು ರಸ್ತೆಯಲ್ಲಿನ ಜವಳಿ ಮತ್ತು ಎಂಜಿನಿಯರಿಂಗ್ ವಸ್ತುಗಳ ಉತ್ಪಾದನಾ ಘಟಕಗಳು, ಒಆರ್‌ಆರ್, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್), ಪಿಇಎಸ್ ವಿಶ್ವವಿದ್ಯಾಲಯ, ಅಂಬೇಡ್ಕರ್ ಕಾಲೇಜು, ಪಾಲಿಟೆಕ್ನಿಕ್ ಕಾಲೇಜು, ಕೆಎಲ್‌ಇ ಕಾಲೇಜು, ದಯಾನಂದಸಾಗರ ವಿಶ್ವವಿದ್ಯಾಲಯ, ಐಟಿಐ ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡಿರುವ ಪ್ರಮುಖ ಪ್ರದೇಶಗಳನ್ನು 3ನೇ ಹಂತವು ಜೋಡಿಸುತ್ತದೆ.