ಕರ್ನಾಟಕ

karnataka

ETV Bharat / bharat

ರಷ್ಯಾ ಯುದ್ಧಕ್ಕೆ ಭಾರತೀಯ ಪ್ರಜೆಗಳ ರವಾನೆ: ಹಲವೆಡೆ ಸಿಬಿಐ ದಾಳಿ, ಮಾನವ ಕಳ್ಳಸಾಗಣೆ ಕೇಸ್​ ದಾಖಲು

ರಷ್ಯಾ - ಉಕ್ರೇನ್ ಯುದ್ಧ ವಲಯಕ್ಕೆ ಭಾರತೀಯ ಪ್ರಜೆಗಳನ್ನು ರವಾನಿಸಿದ್ದ ಮಾನವ ಕಳ್ಳಸಾಗಣೆ ದಂಧೆಯ ಜಾಲವನ್ನು ಸಿಬಿಐ ಪತ್ತೆ ಹಚ್ಚಿಸಿದೆ.

CBI Busts Network Involved In Trafficking Indians To Russia-Ukraine War Zone
ರಷ್ಯಾ ಯುದ್ಧಕ್ಕೆ ಭಾರತೀಯ ಪ್ರಜೆಗಳ ರವಾನೆ: ಹಲವೆಡೆ ಸಿಬಿಐ ದಾಳಿ

By ETV Bharat Karnataka Team

Published : Mar 8, 2024, 10:57 PM IST

ನವದೆಹಲಿ: ರಷ್ಯಾ ಸೇರಿದಂತೆ ವಿದೇಶಗಳಲ್ಲಿ ಲಾಭದಾಯಕ ಉದ್ಯೋಗ ನೀಡುವ ನೆಪದಲ್ಲಿ ಯುವಕರನ್ನು ಗುರಿಯಾಗಿಸಿಕೊಂಡು ದೇಶಾದ್ಯಂತ ಕಾರ್ಯ ನಿರ್ವಹಿಸುತ್ತಿದ್ದ ಪ್ರಮುಖ ಮಾನವ ಕಳ್ಳಸಾಗಣೆ ದಂಧೆಯ ಜಾಲವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಭೇದಿಸಿದೆ. ಇದೇ ವೇಳೆ, ವಿವಿಧ ಸ್ಥಳಗಳಲ್ಲಿ ಕೆಲವು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ.

ದೆಹಲಿ, ತಿರುವನಂತಪುರ, ಮುಂಬೈ, ಅಂಬಾಲಾ, ಚಂಡೀಗಢ, ಮಧುರೈ ಮತ್ತು ಚೆನ್ನೈನ ಸುಮಾರು 13 ಸ್ಥಳಗಳಲ್ಲಿ ದಾಳಿ ಮಾಡಿ ಶೋಧ ಕಾರ್ಯ ನಡೆಸಲಾಗಿದೆ. ಈ ವೇಳೆ, 50 ಲಕ್ಷಕ್ಕೂ ಹೆಚ್ಚು ನಗದು, ಲ್ಯಾಪ್‌ಟಾಪ್‌ಗಳು, ಮೊಬೈಲ್‌ಗಳು, ಡೆಸ್ಕ್‌ಟಾಪ್‌ಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳು, ಎಲೆಕ್ಟ್ರಾನಿಕ್ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೆಲವು ಶಂಕಿತರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಇಲ್ಲಿಯವರೆಗೆ ವಿದೇಶಕ್ಕೆ ಕಳುಹಿಸಿದ ಸಂತ್ರಸ್ತರ ಸುಮಾರು 35 ನಿದರ್ಶನಗಳನ್ನು ಪತ್ತೆಹಚ್ಚಲಾಗಿದೆ. ಹೆಚ್ಚಿನ ಸಂತ್ರಸ್ತರನ್ನು ಗುರುತಿಸುವ ಕಾರ್ಯವಾಗುತ್ತಿದ್ದು, ತನಿಖೆ ಮುಂದುವರೆದಿದೆ ಎಂದು ಸಿಬಿಐ ತಿಳಿಸಿದೆ.

ಈ ದಂಧೆಕೋರರು ಸಂಘಟಿತ ನೆಟ್‌ವರ್ಕ್‌ನಂತೆ ಕಾರ್ಯನಿರ್ವಹಿಸುತ್ತಿದ್ದರು. ಸಾಮಾಜಿಕ ಮಾಧ್ಯಮಗಳ ಮೂಲಕ ಮತ್ತು ತಮ್ಮ ಸ್ಥಳೀಯ ಸಂಪರ್ಕಗಳು ಮತ್ತು ಏಜೆಂಟರ ಮೂಲಕ ರಷ್ಯಾದಲ್ಲಿ ಹೆಚ್ಚು ಸಂಬಳದ ಉದ್ಯೋಗಗಳಿಗಾಗಿ ಭಾರತೀಯ ಪ್ರಜೆಗಳಿಗೆ ಆಮಿಷವೊಡ್ಡುತ್ತಿದ್ದರು. ಇದರ ನಂತರ ಕಳ್ಳಸಾಗಣೆಗೊಳಗಾದ ಭಾರತೀಯ ಪ್ರಜೆಗಳಿಗೆ ಯುದ್ಧದ ಪಾತ್ರಗಳಲ್ಲಿ ತರಬೇತಿ ನೀಡಲಾಗಿದೆ. ಅವರ ಇಚ್ಛೆಗೆ ವಿರುದ್ಧವಾಗಿ ರಷ್ಯಾ - ಉಕ್ರೇನ್ ಯುದ್ಧ ವಲಯದ ಮುಂಚೂಣಿಯ ನೆಲೆಗಳಲ್ಲಿ ನಿಯೋಜಿಸಲಾಗಿದೆ. ಹೀಗಾಗಿ, ಯುವಕರ ಪ್ರಾಣವನ್ನು ಅಪಾಯಕ್ಕೆ ತಳ್ಳಲಾಗಿದೆ. ಕೆಲವರು ಯುದ್ಧ ವಲಯದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂಬುವುದು ಖಚಿತವಾಗಿದೆ ಎಂದು ಸಿಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದಕ್ಕೆ ಸಂಬಂಧಿಸಿದಂತೆ ಇದೇ ಮಾರ್ಚ್ 6ರಂದು ಖಾಸಗಿ ವೀಸಾ ಕನ್ಸಲ್ಟೆನ್ಸಿ ಸಂಸ್ಥೆಗಳು ಮತ್ತು ಏಜೆಂಟರ ವಿರುದ್ಧ ಮಾನವ ಕಳ್ಳಸಾಗಣೆ ಪ್ರಕರಣವನ್ನು ದಾಖಲಿಸಲಾಗಿದೆ. ಉತ್ತಮ ಉದ್ಯೋಗ ಮತ್ತು ಹೆಚ್ಚಿನ ಸಂಬಳದ ಉದ್ಯೋಗದ ನೆಪದಲ್ಲಿ ರಷ್ಯಾಕ್ಕೆ ಭಾರತೀಯ ಪ್ರಜೆಗಳ ಕಳ್ಳಸಾಗಣೆಯಲ್ಲಿ ತೊಡಗಿರುವುದು ಕಂಡು ಬಂದಿದೆ. ಈ ಏಜೆಂಟರ ಮಾನವ ಕಳ್ಳಸಾಗಣೆ ಜಾಲ ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಹರಡಿಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇತ್ತೀಚೆಗೆ ಉದ್ಯೋಗದ ಹೆಸರಲ್ಲಿ ರಷ್ಯಾಗೆ ತೆರಳಿದ್ದ ಹೈದರಾಬಾದ್​ ಮೂಲದ ಯುವಕನೊಬ್ಬ ಉಕ್ರೇನ್‌ನೊಂದಿಗಿನ ಯುದ್ಧದಲ್ಲಿ ಮೃತಪಟ್ಟಿರುವುದು ದೃಢಪಟ್ಟಿದೆ. ಈತನ ಪಾರ್ಥಿವ ಶರೀರವನ್ನು ಭಾರತಕ್ಕೆ ರವಾನಿಸಲು ಪ್ರಯತ್ನಗಳು ನಡೆದಿವೆ ಎಂದು ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಇದನ್ನೂ ಓದಿ:ಉದ್ಯೋಗದ ಹೆಸರಲ್ಲಿ ರಷ್ಯಾಗೆ ಕಳುಹಿಸಿ ಯುದ್ಧಕ್ಕೆ ತಳ್ಳಿದ್ರು: ಭಾರತೀಯ ಯುವಕ ಸಾವು

ABOUT THE AUTHOR

...view details